ಬೆಂಗಳೂರು :
ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಚುನಾವಣಾ ಪ್ರಕ್ರಿಯೆಗಳನ್ನು ಮುಂದುವರೆಸಲು ಆಯೋಗಕ್ಕೆ ಒಪ್ಪಿಗೆ ನೀಡಿದೆ.
ಕೇವಲ ನಾಲ್ಕು ತಿಂಗಳ ಅವಧಿಗೆ ಮೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಿರುವುದನ್ನು ಪ್ರಶ್ನಿಸಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ಎಸ್.ಜಿ.ಪಂಡಿತ್ ಅವರ ಪೀಠ ತಡೆ ನೀಡಲು ನಿರಾಕರಿಸಿತು.
ಸೆಕ್ಷನ್ 154 (ಎ) ಪ್ರಕಾರ ಚುನಾವಣೆ ನಡೆಸುತ್ತಿದ್ದೇವೆ ಎಂದು ಚುನಾವಣಾ ಆಯೋಗದ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ವಾದ ಆಲಿಸಿದ ಕೋರ್ಟ್, ಚುನಾವಣಾ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿತು.
ನವೆಂಬರ್ 3ರಂದು ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ