ಬೆಂಗಳೂರು
ಪವರ್‍ಗ್ರಿಡ್‍ನಿಂದ ವಿದ್ಯುತ್ ಹರಿಯುತ್ತಿರುವುದರಿಂದ ಜಮೀನಿಗೆ ಕಾಲಿಟ್ಟರೆ ವಿದ್ಯುತ್ ಸ್ಪರ್ಶದ ಅನುಭವವಾಗುತ್ತಿದೆ ಎಂದು ದೊಡ್ಡಬಳ್ಳಾಪುರದ ರೈತರು ಆತಂಕ ವ್ಯಕ್ತಪಡಿಸಿ ಜಮೀನಿಗೆ ಕೃಷಿ ಕೆಲಸ ಕಾರ್ಯಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ದೊಡ್ಡಬಳ್ಳಾಪುರದ ಕುರುವೆಗೆರೆಯ ರಾಮಚಂದ್ರಪ್ಪನವರ ದ್ರಾಕ್ಷಿ ತೋಟದ ಪಕ್ಕದಲ್ಲಿ ಪವರ್ ಗ್ರೀಡ್ ಕಂಪನಿಯವರು 765 ಕಿಲೋ ಮೆಗಾ ವಾಟ್ ವಿದ್ಯುತ್‍ನ್ನು ದೊಡ್ಡ ಗಾತ್ರದ ಕಂಬಗಳ ಮೂಲಕ ಸರಬರಾಜು ಮಾಡುತ್ತಿದ್ದಾರೆ. ಆದರೆ ಹೈಟೆನ್ಷನ್ ವಿದ್ಯುತ್ ಲೈನ್‍ಗಳಿಂದ ಕೆಳಗಿನ ರೈತರ ಜಮೀನಿಗೆ ವಿದ್ಯುತ್ ಹರಿಯುತ್ತಿದ್ದು, ವಿದ್ಯುತ್ ಸ್ವರ್ಶದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಈಗ ಕೇವಲ 550 ವ್ಯಾಟ್ ವಿದ್ಯುತ್ ಮಾತ್ರ ಪ್ರಸರಣವಾಗುತ್ತಿದೆ. ಆದರೂ ದ್ರಾಕ್ಷಿ ತೋಟದ ಕಬ್ಬಿಣದ ಕಂಬಿಯಿಂದ ವಿದ್ಯುತ್ ದೀಪ ಉರಿಯುತ್ತದೆ. ಶಾಕ್ ಕೊಡ ಹೊಡೆಯುತ್ತಿದೆ. ಇನ್ನೇನಾದರೂ 765 ಕಿಲೋ ವ್ಯಾಟ್ ವಿದ್ಯುತ್ ಪ್ರಸರಣವಾದರೆ ತೋಟಕ್ಕೆ ಮಾತ್ರವಲ್ಲದೆ ಗ್ರಾಮದಲ್ಲಿ ವಾಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಪವರ್ ಗ್ರಿಡ್ ಲೈನ್ ತಮಿಳುನಾಡಿನ ಧರ್ಮಪುರಿಯಿಂದ ಮಧುಗಿರಿಗೆ ಹಾದು ಹೋಗಿದ್ದು, 765 ಕಿಲೋ ವ್ಯಾಟ್ ವಿದ್ಯುತ್ ಪ್ರಸರಣ ಮಾಡುವ ಎಕ್ಸ್‍ಪ್ರೆಸ್ ಕಾರಿಡಾರ್ ಇದಾಗಿದೆ. ಪವರ್ ಗ್ರಿಡ್ ಕಾರ್ಪೋರೇಷನ್ ಬೇಜವಾಬ್ದಾರಿತನದಿಂದ ರೈತರ ಹೊಲಗಳಿಗೆ ವಿದ್ಯುತ್ ಸ್ವರ್ಶವಾಗುತ್ತಿದೆ. ಇದರಿಂದ ಕೂಲಿ ಕೆಲಸಕ್ಕೂ ಕಾರ್ಮಿಕರು ಬರುತ್ತಿಲ್ಲ.
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ಕೂಡ ದ್ರಾಕ್ಷಿ ತೋಟಕ್ಕೆ ತಗಲಿರುವ ವಿದ್ಯುತ್ ನೋಡಿ ಸ್ಥಳದಿಂದ ಹೋಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ.
ಇದರಿಂದ ನಮಗೆ ಮತ್ತಷ್ಟು ಆತಂಕ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಜಮೀನಿನ ಮಾಲೀಕರು ತಮ್ಮ ಆತಂಕವನ್ನು ತೋಡಿಕೊಂಡರು.
ಪವರ್ ಗ್ರಿಡ್ ಕಂಪನಿಯಿಂದ ರೈತರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದ್ದು ಆರಂಭದಲ್ಲಿ ಸೂಕ್ತ ಪರಿಹಾರ ಇಲ್ಲದೇ ಹೋರಾಟ ನಡೆಸಿದ ರೈತರು, ಇದೀಗ ತಮ್ಮ ಜೀವಕ್ಕೆ ಪವರ್ ಗ್ರಿಡ್‍ನಿಂದ ಕುತ್ತು ಬಂದಿದೆ. ಅದರಿಂದ ಪಾರಾಗಲು ಹವಣಿಸುವಂತಹ ಪರಿಸ್ಥಿತಿ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ