ಸಂಸದರ ಅಮಾನತಿನ ಸಾಲಿಗೆ ಸೇರಿದ ಕರ್ನಾಟಕ ಸಂಸದ…..!

ಬೆಂಗಳೂರು:

   ಸಂಸತ್ ಭದ್ರತಾ ಲೋಪ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ಗುರುವಾರ ಸದನದ ಬಾವಿಗೆ ಇಳಿದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸುರೇಶ್ ಅವರು ಸೇರಿದಂತೆ ಮೂವರು ಸದಸ್ಯರನ್ನು ಅಮಾನತು ಮಾಡಲಾಗಿದೆ. ಸಂಸತ್ತಿನಿಂದ ಡಿ ಕೆ ಸುರೇಶ್‌ ಅಮಾನತುಗೊಂಡ ಬಳಿಕ ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸರ್ವಾಧಿಕಾರಿ ಮನಸ್ಥಿತಿಯ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಕಿಡಿಕಾರಿದ್ದಾರೆ.

   “ಪ್ರಜಾಪ್ರಭುತ್ವದ ದೇವಸ್ಥಾನದ ಒಳಗೆ ಅಕ್ರಮ ಪ್ರವೇಶದ ಮೂಲಕ ದಾಳಿ ಮಾಡಲಾಗಿದ್ದು, ಈ ಭದ್ರತಾ ವೈಫಲ್ಯ ಕುರಿತು ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಸಚಿವರು ಲೋಕಸಭೆಯಲ್ಲಿ ಉತ್ತರ ನೀಡಬೇಕು ಎಂದು ನಾವು ಆಗ್ರಹಿಸಿದೆವು. ಈ ಪ್ರಕರಣದ ತನಿಖೆಯಲ್ಲಿ ಪಾಸ್ ವಿತರಣೆ ಮಾಡಿದ ಸಂಸದರೂ ಸೇರಿದಂತೆ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು ಎಂದು ವಿರೋಧ ಪಕ್ಷಗಳು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಆಗ್ರಹ ಮಾಡಿದೆವು. 

    ಇನ್ನೂ ಬೇರೆಯವರಿಗೆ ರಕ್ಷಣೆ ನೀಡಲಾಗುತ್ತದೆಯೇ ಎಂದು ಧ್ವನಿ ಎತ್ತಿದ ಕಾರಣ, ಇಂದು ಮೂವರು ಸದಸ್ಯರು ಸೇರಿದಂತೆ ವಿರೋಧ ಪಕ್ಷಗಳ ಒಟ್ಟು 146 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಆ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿರೋಧ ಪಕ್ಷವನ್ನು ಹತ್ತಿಕ್ಕಲು ಮುಂದಾಗಿದೆ.

    ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಸಂಸತ್ತಿನ ಎರಡು ಸದನದಿಂದ ಒಟ್ಟು 173 ಸಂಸದರ ಅಮಾನತು, ವಿವರ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾಗಲಿ, ಗೃಹಮಂತ್ರಿಗಳಾಗಲಿ ಲೋಕಸಭೆ ಒಳಗೆ ವಿಷಾದ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಾಗೂ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಆ ಕೆಲಸ ಮಾಡದೆ ನಿಯಮಗಳನ್ನು ಗಾಳಿಗೆ ತೂರಿ ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುತ್ತಿರುವುದು ದುರ್ದೈವದ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಅವರು ವಿರೋಧ ಪಕ್ಷಗಳಿಗೆ ಸೂಕ್ತ ಅವಕಾಶಗಳನ್ನು ನೀಡಬೇಕು.

   ಆದರೆ ನಮ್ಮ ಬಹುತೇಕ ಸದಸ್ಯರನ್ನು ಅಮಾನತು ಮಾಡಿ ಕೆಲವರನ್ನು ಸಮಿತಿ ಮುಂದೆ ಕಳುಹಿಸಿದ್ದಾರೆ. ಆಮೂಲಕ ವಿರೋಧ ಪಕ್ಷಗಳ ನಾಯಕರ ಮಾತನಾಡುವ ಹಕ್ಕನ್ನು ಕಸಿಯುತ್ತಿದ್ದಾರೆ. ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಬೆದರಿಸುವ ತಂತ್ರಗಾರಿಕೆ ಮಾಡುತ್ತಿದೆ. ಇದನ್ನು ಖಂಡಿಸಿ ನಾವು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದಾಗ ಸ್ಪೀಕರ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ಪ್ರತಿಯೊಬ್ಬ ಸದಸ್ಯನ ಹಕ್ಕು. ಅದನ್ನು ಮೊಟಕುಗೊಳಿಸಿ ನಮ್ಮನ್ನು ಸದನದಿಂದ ಹೊರಹಾಕಿದ್ದಾರೆ.

   ಆಡಳಿತ ಪಕ್ಷ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡಿ, ಸಂಸತ್ತಿನ ಉಭಯ ಸದನಗಳ ಒಳಗೆ ಹಾಗೂ ಸದನದ ಹೊರಗೆ ನಮ್ಮ ಧ್ವನಿ ದಮನ ಮಾಡುವ ಪ್ರಯತ್ನ ಮಾಡಿದೆ. 75 ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜಿಪಿಯ ಮಹಾನ್ ನಾಯಕರಾದ ವಾಜಪೇಯಿ, ಅಡ್ವಾಣಿ, ಸುಷ್ಮಾ ಸ್ವರಾಜ್ ರಂತಹವರು ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದಾರೆ. ಆದರೆ 75 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿರೋಧ ಪಕ್ಷಗಳ ಸದಸ್ಯರನ್ನು ಅಮಾನತು ಮಾಡಿರುವ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಸಲ್ಲುತ್ತದೆ.

   ಕಾನೂನು ಎಲ್ಲರಿಗೂ ಒಂದೇ. ಇದೇ ವಿಚಾರದಲ್ಲಿ ವಿರೋಧ ಪಕ್ಷಗಳ ಸದಸ್ಯರು ಪಾಸ್ ನೀಡಿದ್ದರೆ ಈ ಸರ್ಕಾರ ಸುಮ್ಮನೇ ಕೂರುತ್ತಿತ್ತಾ? ಈ ಸರ್ಕಾರ ಪ್ರತಿ ಹಂತದಲ್ಲಿಯೂ ಯಾವ ರೀತಿ ಪ್ರತಿಫಕ್ಷಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದನದಲ್ಲಿ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಅವರು ಮಸೂದೆ ಮಾಡಿಕೊಳ್ಳುತ್ತಿದ್ದಾರೆ.

   130 ಕೋಟಿ ಜನರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕು. ಅದಕ್ಕಾಗಿ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಹೋರಾಟ ಮಾಡುತ್ತಿವೆ. ಆಡಳಿತ ಪಕ್ಷ ಈ ಪ್ರಕರಣದಲ್ಲಿ ವಿಷಯಾಂತರ ಮಾಡುತ್ತಿದೆ. ಈ ವಿಚಾರದಲ್ಲಿ ಹೇಳಿಕೆ ನೀಡುವಂತೆ ನಾವು ಹಕ್ಕೊತ್ತಾಯ ಮಾಡಿದ್ದೇವೆ. ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಸಂಸತ್ ಅಧಿವೇಶನದಲ್ಲಿ ನಮ್ಮ ಧ್ವನಿಗೆ ಅವಕಾಶ ನೀಡದಿದ್ದರೆ, ಬೇರೆ ಸಮಯದಲ್ಲಿ ನಮ್ಮ ಮಾತನ್ನು ಯಾರು ಆಲಿಸುತ್ತಾರೆ.

   ಈ ಪ್ರಕರಣದಲ್ಲಿ ಏನಾಗಿದೆ ಎಂದು ದೇಶದ ಜನರಿಗೆ ಗೊತ್ತಾಗಬೇಕು ಕರ್ನಾಟಕ ವಿಧಾನಸಭೆಯಲ್ಲಿ ಅನಾಮಿಕ ವ್ಯಕ್ತಿ ಪ್ರವೇಶ ಮಾಡಿದ್ದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಎತ್ತಿದ ವಿಚಾರವಾಗಿ ಕೇಳಿದಾಗ, “ಅವರು ಕೂಡ ವಿಧಾನಸಭೆಯಲ್ಲಿ ಸದಸ್ಯರಾಗಿದ್ದಾರೆ. ಅವರು ಆ ವಿಚಾರವನ್ನು ಎತ್ತಬೇಕಿತ್ತು. ವಿಧಾನಸಭೆಯಲ್ಲಿ ಭಯೋತ್ಪಾದಕರ ರೀತಿ ನುಗ್ಗಿ ಹೊಗೆ ಬಾಂಬ್ ದಾಳಿ ಮಾಡಿರಲಿಲ್ಲ.

    ಅವರು ಯಾವುದೇ ಆತಂಕ ಸೃಷ್ಟಿಸಿರಲಿಲ್ಲ. ಆದರೆ ಸಂಸತ್ತಿನ ಒಳಗೆ ಬರಬೇಕಾದರೆ ಒಂದು ಕಾಗದವನ್ನು ಒಳಗೆ ಬಿಡುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ಫೋಟಕ ವಸ್ತುಗಳನ್ನು ಒಳಗೆ ತರಲಾಗಿದೆ ಎಂದರೆ ಅದು ಭದ್ರತಾ ಲೋಪ. ಹೊಸ ಸಂಸತ್ ಭವನ ಕಟ್ಟಿದ್ದೇವೆ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದೇವೆ ಯಾವುದೇ ಪರಿಸ್ಥಿತಿ ಬಂದರೂ ಸಂಸತ್ ಭವನ ಸುರಕ್ಷಿತ ಎಂದು ಹೇಳಿದ್ದರು.

    ಆದರೆ ಸದನ ನಡೆಯುತ್ತಿರುವಾಗ ಕೇವಲ ನಾಲ್ಕೈದು ಜನ ಅಕ್ರಮವಾಗಿ ನುಗ್ಗಿದ್ದಾರೆ. ಈ ಭದ್ರತಾ ವೈಫಲ್ಯದ ಬಗ್ಗೆ ನಾವು ಪ್ರಶ್ನೆ ಎತ್ತುತ್ತಿದ್ದೇವೆ. ಕುಮಾರಸ್ವಾಮಿ ಅವರು ಗಂಟೆಗೊಮ್ಮೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link