ಬೆಂಗಳೂರು:
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ಮಂದಿಟ್ಟು, ಅಂಕಿ ಅಂಶಗಳ ಸಮೇತ ಸಮರ್ಥ ವಾದ ಮಂಡಿಸಲು ರಾಜ್ಯಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ಬೆಳಗ್ಗೆ 10:30ಕ್ಕೆ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ನಡೆಯಲಿದೆ. ಇದರ ನಡುವೆ ಕಾವೇರಿ ನೀರಿಗಾಗಿ ರಾಜ್ಯರೈತರ ಪರವಾಗಿ ಸುಪ್ರೀಂಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಕೆಂಪರಾಜು ಮತ್ತು ಆರ್.ಪಿ.ರವಿ ಎಂಬುವರು ರಾಜ್ಯದ ರೈತರ ಪರವಾಗಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲ್ಲಿಸಿರುವ ಅರ್ಜಿಯ ಜೊತೆಗೆ ರೈತರ ಅರ್ಜಿ ಕೂಡ ವಿಚಾರಣೆ ನಡೆಯಲಿದೆ.
CWMA ಆದೇಶ ಪಾಲನೆ ಮಾಡುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯ ಆಗಿದ್ದು, ಆದೇಶ ಪಾಲನೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ನೀರು ಬಿಡುಗಡೆಗೆ ಸಂಬಂಧಿಸಿ ಪ್ರಾಧಿಕಾರ ನೀಡಿರುವ ಎಲ್ಲಾ ಆದೇಶಗಳನ್ನು ಕರ್ನಾಟಕ ಪಾಲಿಸಿದೆ. ವಿಚಾರಣೆ ವೇಳೆ ಕರ್ನಾಟಕದ ಬಗ್ಗೆ ನ್ಯಾಯಪೀಠಕ್ಕೆ ನಕಾರಾತ್ಮಕ ಅಭಿಪ್ರಾಯ ಬರಬಾರದು ಎಂಬ ಉದ್ದೇಶದಿಂದಲೇ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಂಡಿದೆ.