ಗುಳೇದಗುಡ್ಡ :
ಡೇ-ಎನ್‍ಆರ್‍ಎಲ್‍ಎಂ ಯೋಜನೆಯಡಿ ಉತ್ತಮ ಸಾಧನೆ ಮಾಡಿರುವ ತಾಲೂಕಿನ ಕಟಗೇರಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಗ್ರಾಪಂ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ರಾಷ್ಟ್ರಮಟ್ಟದ ಆತ್ಮ ನಿರ್ಭರ ಸಂಘಟನಾ ಪ್ರಶಸ್ತಿ ದೊರೆತಿದೆ. ಒಕ್ಕೂಟದ ಈ ಸಾಧನೆ ತಾಲೂಕಿಗಷ್ಟೇ ಅಲ್ಲದೇ ಜಿಲ್ಲೆಗೆ ಒಂದು ಮಾದರಿಯಾಗಿದೆ. ಕಟಗೇರಿಯ ಚಾಮುಂಡೇಶ್ವರಿ ಗ್ರಾಪಂ ಮಟ್ಟದ ಒಕ್ಕೂಟ ರಾಷ್ಟ್ರಮಟ್ಟದ ಆತ್ಮನಿರ್ಭರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಡೇ-ಎನ್‍ಆರ್‍ಎಲ್‍ಎಂ ಯೋಜನೆಯಡಿ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ರಾಷ್ಟ್ರಮಟ್ಟದಲ್ಲಿ ಆತ್ಮ ನಿರ್ಭರ ಸಂಘಟನಾ ಪ್ರಶಸ್ತಿ ನೀಡಲಾಗುತ್ತಿದ್ದು, ಆ.15 ರಂದು ಹೊಸದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಮಹಿಳಾ ಒಕ್ಕೂಟಕ್ಕೆ ಆತ್ಮನಿರ್ಭರ ಸಂಘಟನಾ ಪ್ರಶಸ್ತಿ ಪ್ರದಾನ ನಡೆಯಲಿದೆ.
2001ರಲ್ಲಿಯೇ ಕಟಗೇರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಸಹಾಯ ಸಂಘಗಳ ರಚನೆಯಾಗಿತ್ತು. ದಿನ ಕಳೆದಂತೆ ಸಂಘಗಳು ಸಂಘಟನೆಗೊಂಡವು. 2017-18ನೇ ಸಾಲಿನಲ್ಲಿ ಕೊಂಕಣಕೊಪ್ಪ , ಕಟಗೇರಿ ಗ್ರಾಮಗಳ 36 ಸ್ವ ಸಹಾಯ ಸಂಘಗಳು ಸೇರಿ ಕಟ್ಟಿಕೊಂಡಿದ್ದ ಶ್ರೀ ಚಾಮುಂಡೇಶ್ವರಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟ.
ಈ ಮಹಿಳಾ ಒಕ್ಕೂಟದ ಉದ್ದೇಶವೇ ತೀರಾ ಬಡಕುಟುಂಬವನ್ನು ಆರ್ಥಿಕವಾಗಿ ಮೇಲೆತ್ತುವದು ಆ ಕುಟುಂಬದ ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದೇ ಇದರ ಉದ್ದೇಶವಾಗಿತ್ತು. ಆ ನಿಟ್ಟಿನಿಲ್ಲಿ ಕಾರ್ಯಪ್ರವೃತ್ತರಾಗಿ ಕೊಂಕಣಕೊಪ್ಪ , ಕಟಗೇರಿ ಗ್ರಾಮಗಳ ಸ್ವ ಸಹಾಯ ಸಂಘಗಳು ಸೇರಿಕೊಂಡು ಮಹಿಳಾ ಒಕ್ಕೂಟ ರಚನೆ ಮಾಡಿ 36 ಇದ್ದು ಒಕ್ಕೂಟವು 112ಸಂಘಗಳು ಸೇರಿಕೊಂಡಿವೆ. ಇದರಲ್ಲಿ ಸುಮಾರು 1400ಕುಟುಂಬಗಳ 1200 ಮಹಿಳೆಯರು ಈ ಒಕ್ಕೂಟದಲ್ಲಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಸದಸ್ಯರಿಗೆ ತಾವು ಮಾಡುವ ಕೆಲಸ ಬಗ್ಗೆ ಸರಿಯಾದ ತರಬೇತಿ ಇರದಿದ್ದರೇ ಅವರಿಗೆ ಬಾಗಲಕೋಟೆಯ ರುಡ್‍ಸೆಟ್ ಸಂಸ್ಥೆಯ ಮೂಲಕ ಸೂಕ್ತ ತರಬೇತಿಯನ್ನು ಸಹ ನೀಡುತ್ತಿದೆ.
ರಾಜ್ಯ ಸರಕಾರದ ಎನ್‍ಆರ್‍ಎಂಎಲ್ ಯೋಜನೆ ಅಡಿಯಲ್ಲಿ ಸ್ವ ಸಹಾಯ ಸಂಘಗಳ ಪುನಶ್ಚೇತನಕ್ಕಾಗಿ ಸಂಜೀವಿನಿ ಯೋಜನೆ ಅಡಿಯಲ್ಲಿ 2019ರಲ್ಲಿ 6.50ಲಕ್ಷ ಸಾಲ ಹಾಗೂ 2020ರಲ್ಲಿ 14 ಲಕ್ಷ 21 ಸಾವಿರ ಅನುದಾನ ಪಡೆಯಿತು. ಅನುದಾನ ಬಂತೆಂದರು ಮನಬಂದತೆ ಬಳಸಿಕೊಳ್ಳದೇ ಒಕ್ಕೂಟದ ಪದಾಧಿಕಾರಿಗಳು ಸರಿಯಾಗಿ ಸಾಲ ಪಡೆದು ಅದನ್ನು ದುಡಿಮೆಗೆ ಬಳಸುವ ಪ್ರತಿ ಸಂಘದ 3 ಜನ ಮಹಿಳೆಯರಿಗೆ ಶೇ.12ರ ಸೇವಾ ಶುಲ್ಕದಲ್ಲಿ ಸಾಲ ನೀಡಿದರು. ಕಳೇದ ಐದು ವರ್ಷಗಳಲ್ಲಿ ಶ್ರೀ ಚಾಮುಂಡೆಶ್ವರಿ ಒಕ್ಕೂಟವು 2 ಕೋಟಿ 70 ಲಕ್ಷ ವಹಿವಾಟು ಮಾಡಿದೆ. ಅದರಲ್ಲಿ ಒಕ್ಕೂದ ಸದಸ್ಯರಿಗೆ ನೀಡಿದ ಸಾಲದಿಂದ 21 ಲಕ್ಷ 87 ಸಾವಿರ ಸೇವಾ ಶುಲ್ಕ ವಸೂಲಿಯಾಗಿದೆ.
ಒಕ್ಕೂಟಕ್ಕೆ ಆಹಾರ ಘಟಕ ಆರಂಭಿಸಲು ಸಹ ಸರಕಾರ 11 ಲಕ್ಷ 21 ಸಾವಿರ ಅನುದಾನ ನೀಡಿದ್ದು ಆ ಅನುದಾನವನ್ನು ಒಕ್ಕೂಟದಲ್ಲಿನ 26ಜನ ಮಹಿಳೆಯರಿಗೆ ನೀಡಲಾಗಿದ್ದು, ಆ ಮಹಿಳೆಯರು ರೊಟ್ಟಿ ತಯಾರಿಕೆ ಘಟಕ, ಶ್ಯಾವಿಗೆ ತಯಾರಿಕೆ ಘಟಕ, ಬೇಕರಿ ಸೇರಿದಂತೆ ಆಹಾರ ಘಟಕಕ್ಕೆ ಸಂಬಂಧಿಸಿದ ಉದ್ಯೋಗಳನ್ನು ಮಾಡುತ್ತಿದ್ದಾರೆ.
ಈ ಒಕ್ಕೂಟದಲ್ಲಿರುವ ಮಹಿಳೆಯರು ನೇಕಾರಿಕೆ, ಗಣಪತಿ ತಯಾರಿಕೆ, ಬ್ಯೂಟಿಪಾರ್ಲರ್, ಚಹಾ ಅಂಗಡಿ, ತರಕಾರಿ ವ್ಯಾಪಾರ, ಹೋಲಿಗೆ ಕೆಲಸ, ಆರಿ ವರ್ಕ್, ರೊಟ್ಟಿ ವ್ಯಾಪಾರ, ಕೃಷಿ, ಹೈನುಗಾರಿಕೆ ಸೇರಿದಂತೆ ನಾನಾ ತರಹದ ಕೆಲಸಗಳಲ್ಲಿ ತೊಡಗಿದ್ದಾರೆ. ಒಕ್ಕೂಟದಿಂದ ಸಾಲ ಪಡೆದವರು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ಲವೋ ಎಂಬುದರ ಬಗ್ಗೆಯೂ ನಿಗಾವಹಿಸುತ್ತಾರೆ.
ಮಹಿಳಾ ಒಕ್ಕೂಟವು ಆಧುನಿಕತೆಗೆ ತಕ್ಕಂತೆ ಬ್ಯಾಗ್‍ಗಳನ್ನು ತಯಾರಿಸಲು ಮುಂದಾಗಿದ್ದು ಒಕ್ಕೂಟದಲ್ಲಿನ 10 ಜನ ಸೇರಿಕೊಂಡು ಪ್ರಸ್ತುತೆಗೆ ತಕ್ಕಂತೆ ನವೀನ ರೀತಿಯಲ್ಲಿ ಬ್ಯಾಗ್ ತಯಾರಿಕೆ ಮಾಡಲು ಆರಂಭಿಸಿದ್ದು, 6ಜನರು ಬ್ಯಾಗ್ ತಯಾರಿಸುತ್ತಾರೆ. ಇನ್ನೂಳಿದ 4 ಜನರು ಮಾರುಕಟ್ಟೆ ಸಂಪರ್ಕ, ಪ್ಯಾಕಿಂಗ್ ಕಾರ್ಯ ನಿರ್ವಹಣೆ ಮಾಡುತ್ತಾರೆ. ದೆಹಲಿ,ಅಹಮದಾಬಾದ, ಒಸ್ವಾ,ಕಲ್ಕತ್ತಾ ಬೆಂಗಳೂರು ಸೇರಿದಂತೆ ಎಂಟು ರಾಜ್ಯಗಳಲ್ಲಿ ಆಯೋಜಿಸಿದ ಸಮ್ಮೇಳನಗಳಲ್ಲಿ ಭಾಗವಹಿಸಿ ಪರ್ಸ & ಬ್ಯಾಗ್ ಗಳನ್ನು ಮಾರಾಟ ಮಾಡಿ ವಾರ್ಷಿಕವಾಗಿ 8ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸಿದರು.
ಕೋರೊನಾ ಸಮಯದಲ್ಲಿ ಇಡೀ ಜಿಲ್ಲೆಗೆ ಸುಮಾರು 4 ಲಕ್ಷ ಮಾಸ್ಕಗಳನ್ನು ಮಹಿಳಾ ಒಕ್ಕೂಟದ ಸದಸ್ಯರು ತಯಾರು ಮಾಡಿದ್ದರು, ಅಲ್ಲದೇ ಇದರಿಂದ ಮಹಿಳೆಯರಿಗೆ ಆ ಸಮಯದಲ್ಲಿ ಉದ್ಯೋಗವು ಸಹ ದೊರೆಯುವಂತಾಯಿತು. ಇನ್ನೂ ಹರ ಘರ್ ತಿರಂಗಾ ಅಭಿಯಾನದಲ್ಲಿ ಸುಮಾರು 10 ಸಾವಿರ ತಿರಂಗಳನ್ನು ಸಿದ್ದಪಡಿಸಿ ವಿತರಿಸಲಾಗಿತ್ತು. 50 ಸಾವಿರದಿಂದ ಪ್ರಾರಂಭವಾದ ಉದ್ಯೋಗ 5 ವರ್ಷದಲ್ಲಿ 10 ಲಕ್ಷಕ್ಕೂ ಅಧಿಕ ಮೊತ್ತದ ವ್ಯಾಪಾರ ವಹಿವಾಟನ್ನು ಹೊಂದಿದೆ.
ಮಹಿಳಾ ಒಕ್ಕೂಟವು ಕೇವಲ ಮಹಿಳೆಯರಿಗೆ ಆರ್ಥಿಕವಾಗಿ ಸಬಲರನ್ನಾಗಿಸುವದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಘನತ್ಯಾಜ್ಯ ವಿಲೇವಾರಿ, ಶೌಚಾಲಯ ಜಾಗೃತಿ, ಲಿಂಗತ್ವ ಕುರಿತಾಗಿ ಜಾಗೃತಿ, ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ಆರೋಗ್ಯದ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಒಕ್ಕೂಟ ಮಾಡುತ್ತ ಬಂದಿದೆ.
ಈ ಒಕ್ಕೂಟದಲ್ಲಿನ ಮುಖ್ಯಪುಸ್ತಕ ಬರಹಗಾರರು, 3ಜನ ಸಂಪನ್ಮೂಲ ವ್ಯಕ್ತಿಗಳು, ಪಶುಸಖಿ, ಕೃಷಿ ಸಖಿ, ಬ್ಯಾಂಕ್ ಸಖಿ, ಎಫ್‍ಆರ್‍ಸಿಆರ್‍ಪಿ ಸಖಿ ಈ 8ಜನರು ಗೌರವ ಧನದ ಮೇಲೆ ಸೇವೆ ಸಲ್ಲಿಸುತ್ತಿದ್ದು, ಇನ್ನೂ ಒಕ್ಕೂಟದ ಪದಾಧಿಕಾರಿಗಳು ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವಾ ಮನೋಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಪ್ರಶಸ್ತಿ ದೊರಕಿದ್ದು ಖುಷಿ ತರಿಸಿದೆ, ನಮ್ಮ ಒಕ್ಕೂಟದ ಮಹಿಳೆರ ಶ್ರಮಕ್ಕೆ ಸಂದ ಗೌರವಾಗಿದ್ದು, ಈ ಪ್ರಶಸ್ತಿಯು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ನಮ್ಮ ಒಕ್ಕೂಟದಿಂದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರಯತ್ನಿಸುತ್ತೇವೆ.:-ಭಾಗೀರಥಿ ಮೇಟಿ ಶ್ರೀ ಚಾಮುಂಡೇಶ್ವರಿ ಮಹಿಳಾ ಒಕ್ಕೂಟದ ಅಧ್ಯಕ್ಷೆ
ನಮ್ಮ ಒಕ್ಕೂಟವು ಕೇವಲ ಆರ್ಥಿಕವಾಗಿ ಕೆಲಸ ಮಾಡುವದಷ್ಟೇ ಅಲ್ಲದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಈ ಪ್ರಶಸ್ತಿ ಲಭಿಸಿದ್ದು, ಇನ್ನಷ್ಟು ಬಲ ಹೆಚ್ಚಿಸಿದೆ. 36 ಸ್ವಹಾಯಗಳ ಸಂಘಗಳ ಚಾಮುಂಡೇಶ್ವರಿ ಒಕ್ಕೂಟ ಇಂದು 112ಕ್ಕೆ ಬಂದಿದ್ದು, 2 ಕೋಟಿ 87ಸಾವಿರ ವಹಿವಾಟು ನಡೆಸಿದೆ.-ಶೀಲಾ ಮೇಟಿ, ಮುಖ್ಯಪುಸ್ತಕ ಬರಹಗಾರರು








