ನಾಯಕನಹಟ್ಟಿ :
ಪೋಷಕರು ನಿಮ್ಮ ಮಕ್ಕಳಿಗೆ ಟಿ.ವಿ, ಮೊಬೈಲ್‌ನಿಂದ ದೂರವಿಡಿ ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಕಾಟಯ್ಯ ಪೋಷಕರಿಗೆ ಕಿವಿ ಮಾತು ಹೇಳಿದರು.
ಸಮೀಪದ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು ಪೋಷಕರು ನಿಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣ ಟಿ.ವಿ, ಮೊಬೈಲ್‌ನಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ಮಕ್ಕಳು ಚೆನ್ನಾಗಿ ಓದಬೇಕು, ಶಾಲೆಗೆ, ನಿಮ್ಮ ಗ್ರಾಮಕ್ಕೆ ಹೆಸರು ತರಬೇಕು. ವಿದ್ಯಾರ್ಥಿಗಳಲ್ಲಿ ಛಲ ಇದ್ದರೆ ಸಾಧನೆ ಮಾಡಬಹುದು, ಕಷ್ಟಪಟ್ಟು ಅಭ್ಯಾಸ ಮಾಡದೇ ಇಷ್ಟ ಪಟ್ಟು ಅಭ್ಯಾಸ ಮಾಡಬೇಕು.
ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಗುರಿ ಮುಟ್ಟಬೇಕು. ಶಿಕ್ಷಣ ರಂಗದಲ್ಲಿ ದಿನೆ ದಿನೆ ಪೈಪೋಟಿ ನಡೆಯುತ್ತಿದೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಪೋಷಕರು ಸಮಯ ಮೀಸಲಿಡಬೇಕು. ಪೋಷಕರು ಸರಿಯಾದ ಶಿಕ್ಷಣ ನೀಡದಿದ್ದರೆ, ಶಿಕ್ಷಣ ರಂಗದಿಂದ ವಂಚಿತರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ನಿಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರುಗಳು, ಅಡುಗೆ ಸಿಬ್ಬಂದಿಗಳು ಹಾಗೂ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.








