ನವದೆಹಲಿ:
ಭಾರತ ಮತ್ತು ಕತಾರ್ ಮಂಗಳವಾರ ಉಭಯ ದೇಶಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆ ವೃದ್ಧಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಭೇಟಿ ನೀಡಿರುವ ಕತಾರ್ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಇಂದು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಉಭಯ ನಾಯಕರ ಸಮ್ಮುಖದಲ್ಲಿ ಕಾರ್ಯತಂತ್ರದ ಪಾಲುದಾರಿಕೆ ವೃದ್ಧಿಸುವ ಒಪ್ಪಂದ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಕತಾರ್ ಅಮೀರ್ ಭೇಟಿ “ನಮ್ಮ ಬೆಳೆಯುತ್ತಿರುವ ಬಹುಮುಖ ಪಾಲುದಾರಿಕೆಗೆ ಮತ್ತಷ್ಟು ವೇಗ” ನೀಡುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಪ್ರಧಾನಿ ಮೋದಿ ಮತ್ತು ಕತಾರ್ ಅಮೀರ್ ಹೈದರಾಬಾದ್ ಹೌಸ್‌ನಲ್ಲಿ ಹಲವಾರು ದ್ವಿಪಕ್ಷೀಯ ವಿಷಯಗಳನ್ನು ಒಳಗೊಂಡ ಮಾತುಕತೆ ನಡೆಸಿದರು.
ಭಾರತ ಮತ್ತು ಕತಾರ್ ನಡುವೆ ದ್ವಿಮುಖ ತೆರಿಗೆಯನ್ನು ತಪ್ಪಿಸುವ ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆಯನ್ನು ತಡೆಗಟ್ಟುವ ಪರಿಷ್ಕೃತ ಒಪ್ಪಂದವನ್ನು ಸಹ ಈ ವೇಳೆ ವಿನಿಮಯ ಮಾಡಿಕೊಳ್ಳಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಖುದ್ದು ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಬರಮಾಡಿಕೊಂಡಿದ್ದರು.
