ಬೆಂಗಳೂರು:
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ರಮೇಶ್ ವಿ ಕತ್ತಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ್ದು, ಭೇಟಿ ವೇಳೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ವಿಜಯೇಂದ್ರ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರು ಪಕ್ಷದ ಅಧ್ಯಕ್ಷರಾದ ನಂತರ ಅವರ ನಿವಾಸಕ್ಕೆ ಇದು ನನ್ನ ಮೊದಲ ಭೇಟಿಯಾಗಿದ್ದು, ಭೇಟಿ ವೇಳೆ ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರಿಗೆ ತಿಳಿಸಿದಂತೆ ಚಿಕ್ಕೋಡಿಯಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿದೆ. ಈ ಹಿಂದೆ ನನಗೆ ರಾಜ್ಯಸಭೆಗೆ ನಾಮನಿರ್ದೇಶನ ಮತ್ತು ಎಂಎಲ್‌ಸಿ ಹುದ್ದೆಯನ್ನು ನಿರಾಕರಿಸಿದ್ದರಿಂದ ಈ ಬಾರಿ ಪಕ್ಷದ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಿದೆ ಎಂದು ಹೇಳಿದರು.
ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಕುರಿತು ರಾಜ್ಯ ಮತ್ತು ಕೇಂದ್ರ ನಾಯಕತ್ವವು ನಿರ್ಧರಿಸುತ್ತದೆ ಎಂದು ತಿಳಿಸಿದರು.
ರಮೇಶ್ ಕತ್ತಿ ಅವರು ಕಳೆದ ವರ್ಷ ನಿಧನರಾದ ಮಾಜಿ ಸಚಿವ ಉಮೇಶ್ ವಿ ಕತ್ತಿ ಅವರ ಕಿರಿಯ ಸಹೋದರ. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಬಿ ಹುಕ್ಕೇರಿ ವಿರುದ್ಧ 3,003 ಮತಗಳ ಅಂತರದಿಂದ ಸೋಲು ಕಂಡಿದ್ದರು. ಇದರ ಬೆನ್ನಲ್ಲೇ 2019ರಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿ, ಹಾಲಿ ಸಂಸದ ಅಣ್ಣಾಸಾಹೇಬ ಶಂಕರ ಜೊಲ್ಲೆ ಅವರನ್ನು ಪಕ್ಷ ಕಣಕ್ಕಿಳಿಸಿತ್ತು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರೊಂದಿಗೆ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ರಮೇಶ್ ಅವರು ಮತ್ತೆ ಪುನರಾಗಮನದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಯಸುತ್ತಿದ್ದಾರೆ,