ಡೆಹ್ರಾಡೂನ್:
ಕೇದಾರನಾಥ ಯಾತ್ರೆ ಮಾರ್ಗದ ಸೋನ್‌ಪ್ರಯಾಗ ಮತ್ತು ಗೌರಿಕುಂಡ್ ನಡುವೆ ಭೂಕುಸಿತ ಸಂಭವಿಸಿದ್ದು, ಪರಿಣಾಮ ಐವರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.
ಸೋಮವಾರ ರಾತ್ರಿ 7.20ರ ಸುಮಾರಿಗೆ ಕೇದಾರನಾಥಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ಯಾತ್ರಾರ್ಥಿಗಳ ತಂಡವೊಂದು ಭೂಕುಸಿತದಲ್ಲಿ ಸಿಲುಕಿತ್ತು. ಘಟನೆಯ ನಂತರ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಯಾತ್ರಾರ್ಥಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತರನ್ನು ಮಧ್ಯಪ್ರದೇಶದ ದುರ್ಗಾಭಾಯಿ ಖಾಪರ್ (50,) ಸಮನ್ ಭಾಯ್ (50), ಗುಜರಾತ್‌ನ ಭರತ್ ಭಾಯಿ ನಿರಾಲಾಲ್ (52) ಮತ್ತು ನೇಪಾಳದ ತಿತ್ಲಿ ದೇವಿ (70) ಎಂದು ಗುರುತಿಸಲಾಗಿದೆ.
ಅವಶೇಷಗಳಡಿಯಲ್ಲಿ ಇನ್ನಷ್ಟು ಯಾತ್ರಾರ್ಥಿಗಳು ಸಿಲುಕಿರುವ ಸಾಧ್ಯತೆಯಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ನಿರಂತರ ಕಲ್ಲುಬಂಡೆಗಳಿಂದ ಉಂಟಾದ ಪರಿಣಾಮ ಸೋಮವಾರ ತಡರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಮರಳಿ ಕಾರ್ಯಾಚಱಣೆ ಆರಂಭಿಸಿ, ಎರಡು ಮೃತದೇಹಗಳನ್ನು ಹೊರತೆಗೆಯಲಾಯಿತು. ಈ ಮೂಲಕ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ಹೇಳಿದ್ದಾರೆ.