ನನ್ನ ಪ್ರಶ್ನೆಗೆ ಇನ್ನು ಅವರು ಉತ್ತರ ನೀಡಿಲ್ಲ : ಕೇಜ್ರಿವಾಲ್‌

ನವದೆಹಲಿ:

     ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ಕುರಿತು ಗುರುವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಬಾಗಿಲು ತೆರೆದಿರುವುದರಿಂದ ಊಹಿಸಲಾಗದ ಸಂಖ್ಯೆಯಲ್ಲಿ ಆ ದೇಶಗಳ ಜನ ಭಾರತಕ್ಕೆ ಬರುತ್ತಾರೆ ಎಂದು ಗುರುವಾರ ಹೇಳಿದ್ದಾರೆ.

    ಸಿಎಎಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ನನಗೆ ದೇಶ ಮುಖ್ಯ ಎಂದಿದ್ದಾರೆ.

    “ಅವರು ನನ್ನನ್ನು ಭ್ರಷ್ಟ ಎಂದು ಕರೆದಿದ್ದಾರೆ. ಆದರೆ ನನಗೆ ದೇಶ ಮುಖ್ಯ. ನಾನು ಎತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಬದಲಾಗಿ ನನ್ನನ್ನು ನಿಂದಿಸಿದ್ದಾರೆ” ಎಂದು ಡಿಜಿಟಲ್ ಪ್ರೆಸ್‌ನಲ್ಲಿ ಆಮ್ ಆದ್ಮಿ ಪಕ್ಷದ  ನಾಯಕ ಹೇಳಿದ್ದಾರೆ.  

    ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಿಎಎ ಜಾರಿಗೊಳಿಸಿರುವುದು ಭಾರತೀಯ ಜನತಾ ಪಕ್ಷದ(ಬಿಜೆಪಿ) “ಕೊಳಕು ಮತ-ಬ್ಯಾಂಕ್ ರಾಜಕೀಯ”. ಆದರೆ ದೇಶದ ಜನ ಈ ಕಾನೂನನ್ನು ರದ್ದುಗೊಳಿಸಬೇಕೆಂದು ಬಯಸಿದ್ದಾರೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.

    ಸಿಎಎ ಪಾಕಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಬಡವರನ್ನು ಕರೆತಂದು ಅವರು ಇಲ್ಲಿಯೇ ನೆಲೆಸುವಂತೆ ಮಾಡುವುದು ಮತ್ತು ಅವರಿಗೆ ಉದ್ಯೋಗ ಹಾಗೂ ಮನೆಗಳನ್ನು ನೀಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.

    ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬರುವ ನಿರಾಶ್ರಿತರಿಗೆ ಉದ್ಯೋಗ, ಮನೆ ಮತ್ತು ಇತರ ಸಂಪನ್ಮೂಲಗಳು ಎಲ್ಲಿಂದ ಬರುತ್ತವೆ ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    “ನಿಮ್ಮ(ಬಿಜೆಪಿ) ಆಡಳಿತದಲ್ಲಿ ರೋಹಿಂಗ್ಯಾಗಳು ಭಾರತಕ್ಕೆ ಬಂದರು. ನೀವು ಪಾಕಿಸ್ತಾನಿ ನುಸುಳುಕೋರರಿಗೆ ಉದ್ಯೋಗ ಮತ್ತು ಪಡಿತರ ಚೀಟಿಗಳನ್ನು ನೀಡುತ್ತೀರಾ? ಇತರ ದೇಶಗಳ ಅಲ್ಪಸಂಖ್ಯಾತರಿಗೆ ತೆರಿಗೆದಾರರ ಹಣವನ್ನು ಖರ್ಚು ಮಾಡುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಿಎಎ ಜಾರಿಗೊಳಿಸುವುದರಿಂದ ದೇಶ ಅಸುರಕ್ಷಿತವಾಗುತ್ತದೆ ಮತ್ತು ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ” ಎಎಪಿ ನಾಯಕ ಪ್ರತಿಪಾದಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap