ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ್ದ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಿಯಾಂಕಾ ವಾದ್ರಾಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪ್ರಧಾನಿ ಮೋದಿ ವಿರುದ್ಧ ‘ಅವಹೇಳನಕಾರಿ’ ಹೇಳಿಕೆಗಳಿಗಾಗಿ ಚುನಾವಣಾ ಆಯೋಗ ಮಂಗಳವಾರ ಆಪ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಬಗ್ಗೆ ನವೆಂಬರ್ 16ರೊಳಗೆ ಪ್ರತಿಕ್ರಿಯೆ ನೀಡುವಂತೆ ಎಎಪಿ ಪಕ್ಷವನ್ನು ಕೇಳಲಾಗಿದೆ.
ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ‘ಅತ್ಯಂತ ಸ್ವೀಕಾರಾರ್ಹವಲ್ಲ’ ಮತ್ತು ‘ಅನೈತಿಕ’ ವೀಡಿಯೊ ಕ್ಲಿಪ್‌ಗಳು ಮತ್ತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಆಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನವೆಂಬರ್ 10ರಂದು ಚುನಾವಣಾ ಆಯೋಗವನ್ನು ಕೇಳಿತ್ತು. ಕಳೆದ ಬುಧವಾರ ಎಎಪಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಪಿಎಂ ಮೋದಿ ಅವರ ವೀಡಿಯೊ ಕಥೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿತ್ತು. ಮರುದಿನ, ಪಕ್ಷವು ಅದಾನಿ ಮತ್ತು ಮೋದಿಯವರ ಚಿತ್ರವನ್ನು ಪೋಸ್ಟ್ ಮಾಡಿತು. ಪ್ರಧಾನಿ ಜನರಿಗಾಗಿ ಕೆಲಸ ಮಾಡುವುದಿಲ್ಲ ಆದರೆ ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿತ್ತು.
ಇದಾದ ನಂತರ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಪಕ್ಷದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲುನಿ ಮತ್ತು ಪಕ್ಷದ ನಾಯಕ ಓಂ ಪಾಠಕ್ ಸೇರಿದಂತೆ ಬಿಜೆಪಿ ನಿಯೋಗ ಈ ವಿಷಯವಾಗಿ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ.
ಬಿಜೆಪಿಯ ದೂರಿನ ಮೇರೆಗೆ ಎಎಪಿಗೆ ನೀಡಿದ ನೋಟಿಸ್‌ನಲ್ಲಿ, ಮತ್ತೊಂದು ರಾಷ್ಟ್ರೀಯ ಪಕ್ಷದ ಸ್ಟಾರ್ ಪ್ರಚಾರಕರ ವಿರುದ್ಧ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಮಾಡಲಾದ ಹೇಳಿಕೆಗಳು / ಆರೋಪಗಳು / ಸಮರ್ಥನೆಗಳ ಬಗ್ಗೆ ಸ್ಪಷ್ಟನೆ ನೀಡಲು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರನ್ನು ಕೇಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಕೇಜ್ರಿವಾಲ್ ವಿರುದ್ಧ ಏಕೆ ಸೂಕ್ತ ಕ್ರಮ ಕೈಗೊಳ್ಳಬಾರದು ಎಂದು ಆಯೋಗ ಕೇಳಿದೆ.
ಇದೇ ವೇಳೆ ಬಿಜೆಪಿ ದೂರಿನ ಮೇರೆಗೆ ಚುನಾವಣಾ ಆಯೋಗ ಗುರುವಾರ ರಾತ್ರಿ 8 ಗಂಟೆಯೊಳಗೆ ಪ್ರಿಯಾಂಕಾ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಆಯೋಗಕ್ಕೆ ನೀಡಿದ ದೂರಿನಲ್ಲಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳನ್ನು (ಪಿಎಸ್‌ಯು) ಖಾಸಗೀಕರಣಗೊಳಿಸಿದೆ ಎಂದು ಪ್ರಿಯಾಂಕಾ ಅವರು ಆಧಾರರಹಿತ ಮತ್ತು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪ್ರಧಾನಿ ಮೋದಿ ಅವರು ಸಾರ್ವಜನಿಕ ವಲಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಅನ್ನು ತಮ್ಮ ಕೈಗಾರಿಕೋದ್ಯಮಿ ಸ್ನೇಹಿತರಿಗೆ ನೀಡಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದರು.