ನವದೆಹಲಿ
ಕಾನೂನು ಹೋರಾಟದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಹಿನ್ನಡೆ ಉಂಟಾಗಿದೆ. ಅಬಕಾರಿ ನೀತಿ ಹಗರಣದ ಆರೋಪಿಯಾಗಿರುವ ಅವರು ಭಾನುವಾರ ಜೈಲಿಗೆ ಮರಳಬೇಕಿದೆ.
ಅರವಿಂದ್ ಕೇಜ್ರಿವಾಲ್ ಜಾಮೀನು ವಿಸ್ತರಣೆ ಮಾಡುವಂತೆ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಕೋರ್ಟ್ ಜೂನ್ 7ಕ್ಕೆ ಮುಂದೂಡಿಕೆ ಮಾಡಿದೆ. ಆದ್ದರಿಂದ ಜಾಮೀನು ಅವಧಿ ಅಂತ್ಯಗೊಳ್ಳುತ್ತಿರುವ ಕೇಜ್ರಿವಾಲ್ ತಿಹಾರ್ ಜೈಲಿಗೆ ಮರಳಬೇಕಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಷರತ್ತು ಬದ್ಧ ಜಾಮೀನು ಅವಧಿ ಜೂನ್ 1ಕ್ಕೆ ಅಂತ್ಯಗೊಳ್ಳುತ್ತಿದೆ.
ಅರವಿಂದ್ ಕೇಜ್ರಿವಾಲ್ ಜಾಮೀನು ಅವಧಿ ವಿಸ್ತರಣೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್ ಕಳೆ ಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿ ಎಂದು ಸೂಚನೆ ನೀಡಿ, ಅರ್ಜಿ ತಿರಸ್ಕರಿಸಿತ್ತು.
ಆದ್ದರಿಂದ ಅರವಿಂದ್ ಕೇಜ್ರಿವಾಲ್ ದೆಹಲಿ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಶನಿವಾರ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಜಾಮೀನು ವಿಸ್ತರಣೆ ಮಾಡಲು ಆಕ್ಷೇಪಣೆ ಸಲ್ಲಿಕೆ ಮಾಡಿತು.
ಅರವಿಂದ್ ಕೇಜ್ರಿವಾಲ್ ವಿಚಾರಣೆ ಸಂದರ್ಭದಲ್ಲಿ ಆರೋಗ್ಯ ಸೇರಿದಂತೆ ವಿವಿಧ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಾದ ಮಂಡಿಸಿತು. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ನಾನು ಜೂನ್ 2ರಂದು ಶರಣಾಗುತ್ತೇನೆ ಎಂದು ಹೇಳಿದ್ದಾರೆ ಎಂದು ವಾದಿಸಿದರು.
ಅರವಿಂದ್ ಕೇಜ್ರಿವಾಲ್‌ರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಲೋಕಸಭೆ ಚುನಾವಣೆ 2024 ಪ್ರಚಾರದಲ್ಲಿ ಭಾಗವಹಿಸಲು ಸುಪ್ರೀಂಕೋರ್ಟ್ ಮೇ 10ರಂದು ಅರವಿಂದ್ ಕೇಜ್ರಿವಾಲ್‌ಗೆ 21 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು ಮತ್ತು ಜೂನ್ 2ರಂದು ಜೈಲಿಗೆ ವಾಪಸ್ ಆಗಬೇಕು ಎಂದು ಷರತ್ತು ವಿಧಿಸಿತ್ತು.
ತಮಗೆ ಗಂಭೀರ ಕಾಯಿಲೆಗಳಿವೆ, ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಿದೆ ಎಂದು ಆದ್ದರಿಂದ ಜಾಮೀನು ಅವಧಿ ವಿಸ್ತರಣೆ ಮಾಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್ ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಎಂದು ಸೂಚನೆ ನೀಡಿತ್ತು.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದ ಅರವಿಂದ್ ಕೇಜ್ರಿವಾಲ್ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಾನು ಮನೆಯಿಂದ ಹೊರಡುತ್ತೇನೆ, ಜೈಲಿಗೆ ಹೋಗಿ ಶರಣಾಗುತ್ತೇನೆ ಎಂದು ಹೇಳಿದ್ದರು. ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡುವ ಮೊದಲು 50 ದಿನಗಳ ಕಾಲ ಜೈಲಿನಲ್ಲಿದ್ದರು.
2024ರ ಲೋಕಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಕಾಂಗ್ರೆಸ್ ನೇತೃತ್ವದ ಎಎಪಿ ಮೈತ್ರಿಕೂಟವನ್ನು ಬೆಂಬಲಿಸಿದೆ. ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಿದೆ. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಲಿದೆ.
ಅರವಿಂದ್ ಕೇಜ್ರಿವಾಲ್ ಭಾನುವಾರ ಜೈಲಿಗೆ ಹೋಗುವ ಹಿನ್ನಲೆಯಲ್ಲಿ ಇಂಡಿಯಾ ಮೈತ್ರಿಕೂಟ ನವದೆಹಲಿಯಲ್ಲಿ ಇಂದು ಸಂಜೆ ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಲೋಕಸಭೆ ಚುನಾವಣೆ 7ನೇ ಹಂತದ ಮತದಾನವೂ ಇಂದು ನಡೆಯುತ್ತಿದ್ದು, ಎಕ್ಸಿಟ್ ಪೋಲ್ ಫಲಿತಾಂಶ ಸಂಜೆ ಪ್ರಕಟವಾಗಲಿದೆ.
ಜಾಮೀನು ವಿಸ್ತರಣೆ ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆಯನ್ನು ಜೂನ್ 7ರ ತನಕ ದೆಹಲಿ ಕೋರ್ಟ್ ಮುಂದೂಡಿದೆ. ಆದ್ದರಿಂದ ಅವರ ಜಾಮೀನು ಅವಧಿ ಅಂತ್ಯವಾಗುತ್ತಿದ್ದು, ಜೈಲಿಗೆ ಮರಳಬೇಕಿದೆ. ಜೂನ್ 7ರ ಬಳಿಕ ಕೋರ್ಟ್ ಜಾಮೀನು ವಿಸ್ತರಣೆ ಮಾಡಿ ರಿಲೀಫ್ ನೀಡಲಿದೆಯೇ? ಕಾದು ನೋಡಬೇಕಿದೆ.
ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಎಎಪಿ ಪಕ್ಷ ಅಧಿಕಾರದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಎಷ್ಟು ಸ್ಥಾನಗಳಲ್ಲಿ ಜಯಗಳಿಸಲಿದೆ? ಎಂಬುದು ಎಲ್ಲರ ಕುತೂಹಲವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ