ಬೆಂಗಳೂರು:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ದಟ್ಟ ಮಂಜು ಕವಿದ ಪರಿಣಾಮ ಕೆಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬೆಳಗ್ಗೆ ದಟ್ಟ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಇಂಡಿಗೋ ವಿಮಾನ ಲ್ಯಾಂಡ್ ಆಗಲು ಪರದಾಟ ನಡೆಸಬೇಕಾಯಿತು. ಹೈದರಾಬಾದ್ನಿಂದ ಬೆಳಗ್ಗೆ 7.20ಕ್ಕೆ ಬಂದಿದ್ದ ಇಂಡಿಗೋ ವಿಮಾನ, ದಟ್ಟ ಮಂಜು ಕವಿದಿದ್ದ ಕಾರಣ ಇಳಿಯಲು ಸಾಧ್ಯವಾಗದೆ ಹೈದರಾಬಾದ್‌ಗೆ ವಾಪಸಾಯಿತು.
ಈ ವಿಮಾನ 45 ನಿಮಿಷಕ್ಕೂ ಹೆಚ್ಚು ಕಾಲ ಏರ್ಪೋರ್ಟ್ ಸುತ್ತಮುತ್ತ ರೌಂಡ್ಸ್ ಹಾಕಿತು. ದಟ್ಟ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 8.20ರವರೆಗೂ ಆಕಾಶದಲ್ಲೇ ರೌಂಡ್ಸ್ ಹಾಕಿದ ವಿಮಾನಕ್ಕೆ ಕೊನೆಗೂ ಇಳಿಯಲು ಅವಕಾಶ ಸಿಗಲೇ ಇಲ್ಲ. ಪ್ರಯಾಣಿಕರನ್ನು ಹಾಗೇ ವಾಪಸ್ ಹೈದರಾಬಾದ್‌ಗೆ ಇಂಡಿಗೋ ಫ್ಲೈಟ್ ಕರೆದೊಯ್ದಿದೆ.
ಕೆಐಎಬಿಗೆ ಬಂದು ಲ್ಯಾಂಡ್ ಆಗಲಾಗದೆ ವಾಪಸ್ ಆದ ಪ್ರಯಾಣಿಕರು ತಮ್ಮ ಗೋಳು ಇಂಟರ್‌ನೆಟ್‌ನಲ್ಲಿ ತಮ್ಮ ಗೋಳು ತೋಡಿಕೊಂಡಿದ್ದಾರೆ. ಇತರ ಕೆಲವು ವಿಮಾನಗಳು ಕೂಡ ಟೇಕಾಫ್ ಹಾಗೂ ಲ್ಯಾಂಡಿಂಗ್ ಸಮಯಗಳಲ್ಲಿ ಏರುಪೇರು ಅನುಭವಿಸಿದವು. ವಿಮಾನ ನಿಲ್ದಾಣದಲ್ಲಿದ್ದ ಅನೇಕ ಪ್ರಯಾಣಿಕರು ಪ್ರಯಾಣಕ್ಕೆ ತೊಂದರೆ ತಂದೊಡ್ಡಿದ ಮಂಜಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.