ಬೆಂಗಳೂರು:
ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಯಲಹಂಕವೊಂದರಲ್ಲೇ 1 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಜಲಾವೃತವಾಗಿ ಅಲ್ಲಿಯ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. 10 ದಿನಗಳಲ್ಲಿ 3ನೇ ಬಾರಿ ಜಲಾವೃತವಾಗಿದ್ದ ಈ ಅಪಾರ್ಟ್ಮೆಂಟ್ಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ಹೆಣ್ಣೂರು ಅವಘಡದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಇದೀಗ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ಗೆ ನೊಟೀಸ್ ಜಾರಿ ಮಾಡಿದ್ದಾರೆ. ಯಲಹಂಕ ವಲಯ ಜಂಟಿ ಆಯುಕ್ತರಿಂದ ನೊಟೀಸ್ ಜಾರಿಯಾಗಿದೆ. ಕಳೆದ 10 ದಿನದ ಅಂತರದಲ್ಲಿ ಮೂರು ಬಾರಿ ಅಪಾರ್ಟ್ಮೆಂಟ್ಗೆ ಜಲದಿಗ್ಭಂದನವಾಗಿತ್ತು. ಹೀಗಾಗಿ, ಈ ಅಪಾರ್ಟ್ಮೆಂಟ್ ಸುತ್ತ 8 ಅಡಿ ಎತ್ತರದ ಆರ್.ಸಿ.ಸಿ. ತಡೆಗೋಡೆ ನಿರ್ಮಿಸಲು ಸೂಚನೆ ನೀಡಲಾಗಿದೆ. ಈಗಿರುವ ಕಾಂಪೌಡ್ ಮತ್ತೆ ಕುಸಿತ ಕಾಣುತ್ತಿದೆ. ಇದರಿಂದ ಮಳೆ ನೀರು ಒಳಗೆ ನುಗ್ಗುತ್ತಿದೆ.
ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಸುತ್ತಲೂ ನಿರ್ಮಿಸಿರುವ ಕಲ್ಲು ಕಟ್ಟಡದ ಕಾಂಪೌಂಡ್ ಗೋಡೆಯು ಶಿಥಿಲಾವಸ್ಥೆಯಲ್ಲಿದೆ. ಕಾಂಪೌಂಡ್ ನಿಂದ ಮಳೆ ನೀರು ಅಪಾರ್ಟ್‌ಮೆಂಟ್‌ನ ಒಳಭಾಗಕ್ಕೆ ಹರಿದು ಬರುತ್ತಿರುವುದರಿಂದ ಈಗಿನ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಿ ಹೊಸದಾಗಿ ಸುಮಾರು 8 ಅಡಿಗಳ ಎತ್ತರದ ಆರ್.ಸಿ.ಸಿ. ತಡೆಗೋಡೆಯನ್ನು ಅಪಾರ್ಟ್ಮೆಂಟ್ ಸುತ್ತಲೂ ನಿರ್ಮಿಸಲು ಸೂಚನೆ ನೀಡಲಾಗಿದೆ. ಈ ಮೂಲಕ ಮಳೆ ನೀರು, ಅಪಾರ್ಟ್ ಮೆಂಟ್‌ನ ಒಳಭಾಗಕ್ಕೆ ಹರಿಯದಂತೆ ತಡೆಯಲು ಸೂಚನೆ ನೀಡಲಾಗಿದೆ.
ಅಪಾರ್ಟ್‌ಮೆಂಟ್‌ನ ಒಳಭಾಗದಲ್ಲಿ ಶೇಖರಣೆಯಾಗುತ್ತಿರುವ ಮಳೆ ನೀರನ್ನು ಆ ಅಪಾರ್ಟ್ಮೆಂಟ್ ಪೂರ್ವ ದಿಕ್ಕಿನಲ್ಲಿರುವ ರಾಜಕಾಲುವೆಗೆ ನೇರವಾಗಿ ಕಲ್ಪಿಸಿರುವುದರಿಂದ ರಾಜಕಾಲುವೆಯಲ್ಲಿ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಅಪಾರ್ಟ್ಮೆಂಟ್ ಒಳಭಾಗದಲ್ಲಿ ನೀರು ಶೇಖರಣೆಯಾಗುತ್ತಿದೆ. ಮಳೆ ನೀರು ರಾಜಕಾಲುವೆಗೆ ಹರಿಯದೇ ಅಪಾರ್ಟ್ಮೆಂಟ್ ಒಳಭಾಗದಲ್ಲಿಯೇ ನಿಂತು ನೀರಿನ ಮಟ್ಟ ಹೆಚ್ಚಾಗುತ್ತಿರುತ್ತದೆ. ರಾಜಕಾಲುವೆಗೆ ನೇರವಾಗಿ ಸಂಪರ್ಕ ಕಲ್ಪಿಸಿರುವ ಡ್ರೈನ್ ಅನ್ನು ಮುಚ್ಚಬೇಕು. ಶೇಖರಣೆಗೊಳ್ಳುವ ಎಲ್ಲಾ ನೀರನ್ನು ಒಂದು ಕಡೆ ಶೇಖರಣೆ ಮಾಡಲು ಸಂಪ್ ನಿರ್ಮಾಣ ಮಾಡಬೇಕು. ನೀರನ್ನು ಪಂಪ್ ಮೂಲಕ ರಾಜಕಾಲುವೆಗೆ ಹರಿದು ಬಿಡಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಸುಮಾರು 2500 ಜನರು ವಾಸವಾಗಿರುವ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ನೀರಿನಿಂದ ಆವೃತವಾಗಿದ್ದು, NDRF ಮತ್ತು SDRF ಟೀಂ ಬೋಟಿಂಗ್ ಮೂಲಕ ಕಾರ್ಯಾಚರಣೆ ಶುರು ಮಾಡಿತ್ತು. ಬೋಟ್ನಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿತ್ತು.