ಕೇರಳದಿಂದ ಕರ್ನಾಟಕದ ಬರ ಪರಿಸ್ಥಿತಿ ದುರುಪಯೋಗ : ಎಂ.ಬಿ. ಪಾಟೀಲ್‌

ಬೆಂಗಳೂರು:

    ಭೀಕರ ಬರಗಾಲದ ಇಂತಹ ಪರಿಸ್ಥಿತಿಯಲ್ಲಿ ನೀರಿನ ಕೊರತೆ ಮುಂದಿಟ್ಟುಕೊಂಡು ಬೆಂಗಳೂರಿನ ಕೈಗಾರಿಕೆಗಳ ಒಲಿಸಿಕೊಳ್ಳುವ ಕೇರಳ ಪ್ರಯತ್ನ ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಸಚಿವ ಎಂಬಿ ಪಾಟೀಲ್ ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವ ಎಂಬಿ ಪಾಟೀಲ್, ನೀರಿನ ಕೊರತೆ ಮುಂದಿಟ್ಟುಕೊಂಡು ರಾಜ್ಯದ ಐ.ಟಿ ಕಂಪನಿಗಳಿಗೆ ಕೇರಳ ಸರ್ಕಾರ ಗಾಳ ಹಾಕುತ್ತಿರುವುದು ಖಂಡನೀಯ. ಬರಗಾಲ ಮತ್ತು ಬೇಸಿಗೆಗೆ ನಮ್ಮ ದೇಶವೂ ಸೇರಿದಂತೆ ಜಗತ್ತಿನ ಹಲವೆಡೆ ನೀರಿನ ಕೊರತೆ ಉಂಟಾಗಿರುವುದು ನಿಸರ್ಗ ಸಹಜ ವಿದ್ಯಮಾನದ ಪರಿಣಾಮವಾಗಿದೆ.

    ಇದಕ್ಕೆ ಕೇರಳವೂ ಹೊರತಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಕೈಗಾರಿಕಾ ಸಚಿವರಾದ ಪಿ. ರಾಜೀವ್ ಅವರು ಬೆಂಗಳೂರಿನಲ್ಲಿ ನೀರಿಲ್ಲವೆಂದು ತಮ್ಮ ರಾಜ್ಯಕ್ಕೆ ಬರುವಂತೆ ಇಲ್ಲಿನ ಐ.ಟಿ. ಕಂಪನಿಗಳಿಗೆ ಆಹ್ವಾನಿಸಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದು ಒಕ್ಕೂಟ ವ್ಯವಸ್ಥೆಯ ತತ್ತ್ವಕ್ಕೆ ವಿರುದ್ಧವಾದುದು. ಅವರ ಈ ನಡವಳಿಕೆ ಆರೋಗ್ಯಕರವಲ್ಲ ಎಂದು ಹೇಳಿದ್ದಾರೆ.

    ನಮ್ಮ ನೀರಿನ ಕೊರತೆಯ ಸಂದರ್ಭದಲ್ಲಿ ಬೆಂಗಳೂರಿನ ವ್ಯವಹಾರಗಳನ್ನು ಆಕರ್ಷಿಸಲು ಕೇರಳದ ಪ್ರಯತ್ನಗಳು ನಾವು ಗೌರವಿಸುವ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿದೆ. ಅಂತಹ ಕ್ರಮಗಳು ಅಂತರರಾಜ್ಯ ಸಹಕಾರದ ಅಡಿಪಾಯವನ್ನು ಸವಾಲು ಮಾಡುವುದಲ್ಲದೆ, ಹಂಚಿಕೆಯ ಸವಾಲುಗಳನ್ನು ಸಹಯೋಗದಿಂದ ನಿಭಾಯಿಸುವ ಪ್ರಾಮುಖ್ಯತೆಯನ್ನು ಕಡೆಗಣಿಸುತ್ತವೆ.

    ಕರ್ನಾಟಕದಲ್ಲಿ, ನಮ್ಮ ಬೆಳವಣಿಗೆ ಮತ್ತು ಸ್ಥಿರತೆಯ ದಾರಿದೀಪವಾಗಿ ಮುಂದುವರಿಯುವುದನ್ನು ಖಾತ್ರಿಪಡಿಸುವ, ನಾವೀನ್ಯತೆ ಮತ್ತು ಸುಸ್ಥಿರ ಪರಿಹಾರಗಳ ಮೇಲೆ ಅಭಿವೃದ್ಧಿ ಹೊಂದುವ ಚೇತರಿಸಿಕೊಳ್ಳುವ, ಉದ್ಯಮ-ಸ್ನೇಹಿ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ನಮ್ಮ ಗಮನವು ಸ್ಥಿರವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

   ಒಕ್ಕೂಟ ವ್ಯವಸ್ಥೆಯಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆ ಇರಬೇಕೇ ವಿನಾ ಪರಿಸ್ಥಿತಿಯ ದುರ್ಲಾಭ ಪಡೆಯಲು ನೋಡಬಾರದು. ಇದರಿಂದ ಯಾರಿಗೂ ಒಳಿತಾಗುವುದಿಲ್ಲ. ಈ ಪ್ರಾಥಮಿಕ ಸತ್ಯವನ್ನು ಕೇರಳದ ಸಚಿವರು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿ ಕೇರಳ ಮೂಲದ ಲಕ್ಷಾಂತರ ಯುವಕ- ಯುವತಿಯರು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಮರೆಯಬಾರದು. ಕೇರಳ ಒಂದು ರಾಜ್ಯವಾಗಿ ಎಷ್ಟು ಬೇಕಾದರೂ ಬಂಡವಾಳ ಆಕರ್ಷಿಸಲಿ. ಆ ಸ್ವಾತಂತ್ರ್ಯ ಅವರಿಗಿದೆ. ಅದು ಬಿಟ್ಟು ಕ್ಷುಲ್ಲಕ ರಾಜಕಾರಣ ಸರಿಯಲ್ಲ ಎಂದಿದ್ದಾರೆ.

    ಅಂತೆಯೇ ಕಳೆದ ಎರಡೂವರೆ ದಶಕಗಳಲ್ಲಿ ಬೆಂಗಳೂರು ದೇಶದ ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಕೇರಳಕ್ಕೆ ಇಂತಹ ಸಾಧನೆ ಸಾಧ್ಯವಾಗಿಲ್ಲ. ನೀರಿನ ಕೊರತೆಯನ್ನೇ ಮುಂದಿಟ್ಟುಕೊಂಡು ಇನ್ನೊಬ್ಬರ ಅವಕಾಶಗಳನ್ನು ಕಸಿದುಕೊಳ್ಳುತ್ತೇವೆ ಎನ್ನುವ ಚಿಂತನೆ ಅತ್ಯಂತ ಅಪಾಯಕಾರಿ ಎಂದು ಕಿಡಿಕಾರಿದ್ದಾರೆ.

    ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಆಲಮಟ್ಟಿ, ಧಾರವಾಡ, ಕಿತ್ತೂರು, ದುರ್ಗದಕೇರಿ ಕೈಗಾರಿಕಾ ಪ್ರದೇಶಗಳಿಗೆ ಮಲಪ್ರಭಾ ನದಿಯಿಂದ ನೀರು ಸರಬರಾಜು ಮಾಡುವ ಯೋಜನೆಗೆ ಟೆಂಡರ್ ಕರೆದಿದ್ದು, ಅನುಷ್ಠಾನದ ಹಂತದಲ್ಲಿ ಇದೆ. ರಾಜ್ಯದ ಎಲ್ಲೆಡೆ ಈ ರೀತಿಯ ಯೋಜನೆಗಳನ್ನು ರೂಪಿಸುತ್ತಿದ್ದು, ಕೈಗಾರಿಕಾ ಪ್ರದೇಶಗಳಿಗೆ ಪ್ರತ್ಯೇಕ ನೀರು ಸರಬರಾಜಿಗೆ ಕ್ರಮ ವಹಿಸಲಾಗಿದೆ. ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನದಿಯಿಂದ ನೀರು ತರುವ ಪ್ರತ್ಯೇಕ ಯೋಜನೆ ಜಾರಿ ಸಂಬಂಧ ಹಲವು ಸಭೆಗಳನ್ನು ನಡೆಸಿ, ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap