ಕ್ಯಾಲಿಫೋರ್ನಿಯಾ
ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಮಾರ್ಟ್ಫೋನ್ ಕಂಪನಿಯಾದ ಆ್ಯಪಲ್ಗೆ ಚೀಫ್ ಫೈನಾನ್ಷಿಯಲ್ ಆಫೀಸರ್ ಆಗಿ ಭಾರತ ಮೂಲದ ಕೇವನ್ ಪರೇಖ್ ನೇಮಕವಾಗಿದ್ದಾರೆ. ಲ್ಯೂಕಾ ಮೇಸ್ಟ್ರಿ ಅವರ ಸ್ಥಾನವನ್ನು ಪರೇಖ್ ತುಂಬಲಿದ್ದಾರೆ. ಲೂಕಾ ಅವರು ಸಿಎಫ್ಒ ಸ್ಥಾನದಿಂದ ಹೊರಹೋಗುತ್ತಾರಾದರೂ ಆ್ಯಪಲ್ ಕಂಪನಿಯಲ್ಲಿ ಅವರು ಬೇರೆ ಜವಾಬ್ದಾರಿಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರಸಕ್ತ ಸಿಎಫ್ಒ ಆಗಿರುವ ಲೂಕಾ ಮೇಸ್ಟ್ರಿ ಅವರು 2024ರ ಡಿಸೆಂಬರ್ 31ರವರೆಗೂ ಅದೇ ಸ್ಥಾನದಲ್ಲಿ ಮುಂದುವರಿದು ಆ ಬಳಿಕ ಹುದ್ದೆಯನ್ನು ಕೇವನ್ ಪರೇಖ್ ಅವರಿಗೆ ಬಿಟ್ಟು ಕೊಡಲಿದ್ದಾರೆ. ಆ ಬಳಿಕ ಇನ್ಫಾರ್ಮೇಶನ್ ಸಿಸ್ಟಮ್ಸ್ ಮತ್ತ ಟೆಕ್ನಾಲಜಿ, ಇನ್ಫಾರ್ಮೇಶನ್ ಸೆಕ್ಯೂರಿಟಿ, ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಸೇರಿದಂತೆ ವಿವಿಧ ಕಾರ್ಪೊರೇಟ್ ಸರ್ವಿಸ್ ಟೀಮ್ಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಲೂಕಾ ಅವರು ಸಿಎಫ್ಒ ಆಗಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಆ್ಯಪಲ್ನ ಆದಾಯ ಎರಡು ಪಟ್ಟು ಹೆಚ್ಚಾಗಿತ್ತು. ಸರ್ವಿಸ್ಗಳಿಂದ ಬರುತ್ತಿದ್ದ ಆದಾಯ ಐದು ಪಟ್ಟು ಹೆಚ್ಚಾಗಿತ್ತು.
ಕೇವನ್ ಪರೇಖ್ ಅವರಿಗೆ ಲೂಕಾ ಮೇಸ್ಟ್ರಿ ಅವರ ಕೆಲಸದ ಮೇಲ್ಪಂಕ್ತಿ ಇದೆ. ಆ್ಯಪಲ್ನಲ್ಲಿರುವ ಬಂಡವಾಳವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವುದು ದೊಡ್ಡ ಸವಾಲು. ಬೇರೆ ಸಣ್ಣ ಪುಟ್ಟ ಸಂಸ್ಥೆಗಳನ್ನು ಖರೀದಿಸುವ ಅವಕಾಶಗಳನ್ನು ಅವರು ಹುಡುಕಬೇಕಿದೆ.