ಬೆಂಗಳೂರು:
ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಲೋಕಾಯುಕ್ತ ಶಾಕ್ ನೀಡಿದ್ದರು. ಇದೀಗ ಅವರ ಜೊತೆ ವ್ಯವಹಾರ ಹೊಂದಿದ್ದ ವ್ಯಕ್ತಿಗಳಿಗೂ ಇದೀಗ ಸಂಕಷಷ್ಟ ಎದುರಾಗಿದೆ. ಇದೀಗ ಕೆಜಿಎಫ್ ಬಾಬುಗೂ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜಮೀರ್ಗೆ ಕೋಟಿ ಕೋಟಿ ಹಣ ನೀಡಿದ್ದ ಕೆಜಿಎಫ್ ಬಾಬುಗೆ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಜಮೀರ್ ಅಹ್ಮದ್ಗೆ 2013 ರಲ್ಲಿ ಕೆಜಿಎಫ್ ಬಾಬು 3.70 ಕೋಟಿ ಸಾಲ ನೀಡಿದ್ದರು ಎನ್ನಲಾಗ್ತಿದೆ. ಜಮೀರ್ ಖಾನ್ ಮನೆ ಖರೀದಿ ವೇಳೆ ಸಾಲ ನೀಡಲಾಗಿದೆ. ಜೊತೆಗೆ ಹಣವನ್ನ ಯಾವ ಯಾವ ಕಾರಣಕ್ಕಾಗಿ ನೀಡಿದ್ದೀರಿ, ಇಬ್ಬರ ನಡುವಿನ ವ್ಯವಹಾರಗಳೇನು ಎಂದು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ನೋಟಿಸ್ ತಲುಪಿದ 7 ದಿನಗಳೊಳಗೆ ಹಾಜರಾಗಲು ಸೂಚಿಸಲಾಗಿದೆ. ಇದೇ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಕೂಡ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಜಮೀರ್ ಅಹಮದ್ ಖಾನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ 2019 ರಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಆಗ ಜಮೀರ್ಗೆ ಹಣಕಾಸು ನೆರವು ಅಥವಾ ನೀಡಿದ ವಿವರಗಳನ್ನು ಇಡಿ ಸಂಗ್ರಹಿಸಿತ್ತು. ರಾಧಿಕಾ ಕುಮಾರಸ್ವಾಮಿ ಕೂಡ ಹಣ ನೀಡಿದ್ದರು ಎಂಬುದು ತಿಳಿದು ಬಂದಿತ್ತು. ಆಗ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದು, ಜಮೀರ್ ಸಚಿವರಾಗಿದ್ದರು. ಜಮೀರ್ ವಿರುದ್ಧ ಭ್ರಷ್ಟಾಚಾರ ವಿಗ್ರಹದಳ (ಎಸಿಬಿ) ಪ್ರಕರಣ ದಾಖಲಿಸಿತ್ತು. ಬಳಿಕ ರಾಜ್ಯದಲ್ಲಿ ಎಸಿಬಿ ರದ್ದುಗೊಂಡಿದ್ದರಿಂದ ಆ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಮುಂದುವರಿಸಿತ್ತು. ಅದರಂತೆ ತನಿಖೆಗೆ ಹಾಜರಾಗುವಂತೆ ರಾಧಿಕಾ ಕುಮಾರಸ್ವಾಮಿಗೆ ನೋಟಿಸ್ ನೀಡಲಾಗಿತ್ತು.
ವಿಚಾರಣೆ ವೇಳೆ ರಾಧಿಕಾ, ದಶಕದ ಹಿಂದೆ ತಾವು ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ಒಪ್ಪಿಕೊಂಡು ಹೇಳಿಕೆ ದಾಖಲಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ, ನಾನು 2012ರಲ್ಲಿ ಶಮಿಕಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದ್ದೆ. ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಲನಚಿತ್ರದ ಯಶಸ್ಸಿನಿಂದ ಸಂಪಾದಿಸಿದ ಹಣದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಜಮೀರ್ ಅಹ್ಮದ್ ಅವರಿಗೆ 2.5 ಕೋಟಿ ರೂಗಳನ್ನು ಸಾಲವಾಗಿ ನೀಡಿದ್ದೆ ಎಂದು ರಾಧಿಕಾ ತಿಳಿಸಿದ್ದಾರೆ ಎನ್ನಲಾಗಿದೆ.








