2.13 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಕಡಿತ, ಸಿಎಂ ಖಡಕ್‌ ಸೂಚನೆ

ಬೆಂಗಳೂರು :

    ರಾಜ್ಯದಲ್ಲಿರುವ ಅನರ್ಹ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಐಟಿ ರಿಟರ್ನ್ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ  ಲಾಭ ಪಡೆಯುವ ಕುರಿತು ಇರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ  ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ 2.13 ಲಕ್ಷ ಫಲಾನುಭವಿಗಳು ಐಟಿ/ಜಿಎಸ್ಟಿ ವ್ಯಾಪ್ತಿಗೊಳಪಡುತ್ತಾರೆ. ಇವರ ಗೃಹಲಕ್ಷ್ಮಿ ಆದಾಯ ಮುಂದಿನ ತಿಂಗಳಿನಿಂದ ಬಂದ್‌ ಆಗಲಿದೆ.

   ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐಟಿ ರಿಟರ್ನ್ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವ ಕುರಿತು ಇರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

   ಮರಣ ಹೊಂದುವ ಫಲಾನುಭವಿಗಳ ಪಟ್ಟಿಯನ್ನು ಪ್ರತಿ ತಿಂಗಳು ಪಂಚಾಯತ್ ಹಂತದಲ್ಲಿ ನವೀಕರಿಸಿ ಸಂಬಂಧಪಟ್ಟ ಬ್ಯಾಂಕುಗಳಿಗೆ ಮಾಹಿತಿಯನ್ನು ಒದಗಿಸಬೇಕು. ಮರಣ ಹೊಂದುವ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು. ಪಂಚಾಯತ್ ಮಟ್ಟದಲ್ಲಿ ಫಲಾನುಭವಿಗಳ ಸೇರ್ಪಡೆ ಮತ್ತು ತೆಗೆದು ಹಾಕುವಿಕೆಗೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

   ಪಂಚ ಗ್ಯಾರಂಟಿ ಯೋಜನೆ ಅಡಿ ಇದುವರೆಗೆ ರೂ. 97,813 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ಒಟ್ಟು ರೂ.50,005 ಕೋಟಿ, ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನುಭವಿಗಳಿಗೆ ರೂ. 18,139 ಕೋಟಿ, ಯುವನಿಧಿ ಯೋಜನೆಯಡಿ 2.55 ಲಕ್ಷ ಫಲಾನುಭವಿಗಳಿಗೆ ರೂ.623 ಕೋಟಿ, ಶಕ್ತಿ ಯೋಜನೆಯಡಿ ₹544 ಕೋಟಿ ಉಚಿತ ಟಿಕೆಟ್ ಪ್ರಯಾಣಿಕರಿಗೆ ರೂ.13,903 ಕೋಟಿ ಹಾಗೂ ಅನ್ನಭಾಗ್ಯ ಯೋಜನೆಯಡಿ 72.02 ಕೋಟಿ ಫಲಾನುಭವಿಗಳಿಗೆ ಒಟ್ಟು 11,821.17 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

   ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯವನ್ನು ಪಂಚಾಯತ್ ಮಟ್ಟದಲ್ಲಿ ನಡೆಸಬೇಕು. ಈ ಕುರಿತಾಗಿರುವ ಮಾನದಂಡಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ಕಿಯ ಬದಲು ಪ್ರದೇಶವಾರು ಇತರ ಧಾನ್ಯಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ವಹಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳ ಲಾಭ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆಂದೋಲನ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

   ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ “ಗೃಹಲಕ್ಷ್ಮಿ” ಯೋಜಯು ಒಂದಾಗಿದ್ದು, ದಿನಾಂಕ:-06-06-2023ರ ಆದೇಶ ಹಾಗೂ ದಿನಾಂಕ:-17-07-2023ರ ಮಾರ್ಗಸೂಚಿ ಯಂತೆ ಅನುಷ್ಠಾನಗೊಳಿಸಲಾಗುತ್ತಿದೆ. ದಿನಾಂಕ:-17-07-2023 ರಂದು ಹೊರಡಿಸಿದ ಮಾರ್ಗಸೂಚಿ ಅನ್ವಯ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಜಿ.ಎಸ್.ಟಿ. ರಿಟನ್ರ್ಸ್ ಸಲ್ಲಿಸುವವರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ.

   ಈವರೆಗೆ ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ 2.13 ಲಕ್ಷ ಫಲಾನುಭವಿಗಳು ಐಟಿ/ಜಿಎಸ್ಟಿ ವ್ಯಾಪ್ತಿಗೊಳಪಡುತ್ತಾರೆ ಎಂದು ತಿಳಿದು ಬಂದಿರುತ್ತದೆ. ದಿನಾಂಕ: 15-07-2025ರ ಎಂಪಿಐಸಿ ಸಭೆಯಲ್ಲಿ ಐಟಿ/ಜಿಎಸ್ಟಿ ಟ್ಯಾಕ್ಸ್ ಪೇಯಿ ಎಂದು ಸ್ಟೆಟಸ್ ತೋರಿಸುತ್ತಿರುವ ಫಲಾನುಭವಿಗಳು ಐಟಿ/ಜಿಎಸ್ಟಿ ಟ್ಯಾಕ್ಸ್ ಪೇಯಿ ಗೆ ಒಳಪಡುವುದರಿಂದ ಅರ್ಜಿ ಪರಿಗಣಿಸಲು ಬರುವುದಿಲ್ಲ.

    ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯಡಿ ಐಟಿ/ಜಿಎಸ್ಟಿ ಟ್ಯಾಕ್ಸ್ ಪೇಯಿ ಎಂದು ಸ್ಟೆಟಸ್ ತೋರಿಸುತ್ತಿರುವ ಫಲಾನುಭವಿಗಳ ಧನಸಹಾಯ ಪಾವತಿಗಾಗಿ ಮನವಿ ಸಲ್ಲಿಸಿದಲ್ಲಿ ಐಟಿ/ಜಿಎಸ್ಟಿ ಟ್ಯಾಕ್ಸ್ ಪೇಯಿಗಳಾಗಿರುವುದರಿಂದ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸೋಮವಾರಪೇಟೆ ಇವರ ಹಂತದಲ್ಲಿ ಹಿಂಬರಹ ನೀಡುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Recent Articles

spot_img

Related Stories

Share via
Copy link