ನವದೆಹಲಿ:
ಖಲಿಸ್ತಾನಿ ಭಯೋತ್ಪಾದಕರು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಖಲಿಸ್ತಾನ ಭಯೋತ್ಪಾದಕ ಗುಂಪು ಎಂದು ಗುರುತಿಸಲ್ಪಟ್ಟಿರುವ ಸಿಖ್ಸ್ ಫಾರ್ ಜಸ್ಟೀಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಆಸ್ಟ್ರೇಲಿಯಾದಲ್ಲಿ ನವೆಂಬರ್ 1ರಂದು ನಡೆಯಲಿರುವ ದೋಸಾಂಜ್ ಅವರ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಪಾದಗಳನ್ನು ಮುಟ್ಟಿರುವುದಕ್ಕೆ ಈ ಬೆದರಿಕೆ ಬಂದಿದೆ ಎನ್ನಲಾಗಿದೆ.
ಪಂಜಾಬಿ ಗಾಯಕ, ನಟ ದಿಲ್ಜಿತ್ ದೋಸಾಂಜ್ ಅವರು ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಬಚ್ಚನ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ಕಾರ್ಯಕ್ರಮದ ಕಂತು ಅಕ್ಟೋಬರ್ 31ರಂದು ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಪ್ರೋಮೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಸಿಖ್ಸ್ ಫಾರ್ ಜಸ್ಟೀಸ್ ಬುಧವಾರ ದಿಲ್ಜಿತ್ ದೋಸಾಂಜ್ ಅವರಿಗೆ ಬೆದರಿಕೆ ಹಾಕಿದೆ.
ನವೆಂಬರ್ 1ರಂದು ಆಸ್ಟ್ರೇಲಿಯಾದಲ್ಲಿ ದೋಸಾಂಜ್ ಅವರ ಕಾರ್ಯಕ್ರಮ ನಡೆಯಲಿದ್ದು, ಇದನ್ನು ನಿಲ್ಲಿಸುವುದಾಗಿ ಸಿಖ್ಸ್ ಫಾರ್ ಜಸ್ಟೀಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ. ಪಂಜಾಬಿ ನಟ, ಗಾಯಕ ದಿಲ್ಜಿತ್ ದೋಸಾಂಜ್ ಅವರು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಪಾದಗಳನ್ನು ಮುಟ್ಟುವ ಮೂಲಕ 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರನ್ನು ಅವಮಾನಿಸಿದ್ದಾರೆ ಎಂದು ಸಿಖ್ಸ್ ಫಾರ್ ಜಸ್ಟೀಸ್ ಹೇಳಿದೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರಕ್ತಕ್ಕಾಗಿ ರಕ್ತ ಎಂಬ ಜನಾಂಗೀಯ ಹತ್ಯೆಯ ಘೋಷಣೆಯನ್ನು ಕೂಗುವ ಮೂಲಕ ಜನಸಮೂಹವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿರುವ ಸಿಖ್ಸ್ ಫಾರ್ ಜಸ್ಟೀಸ್, ಬಚ್ಚನ್ ಅವರ ‘ಖೂನ್ ಕಾ ಬದ್ಲಾ ಖೂನ್’ ಕರೆಯು ಹಿಂಸಾಚಾರವನ್ನು ಬಿಚ್ಚಿಟ್ಟಿದೆ. 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಭಾರತದಾದ್ಯಂತ 30,000 ಕ್ಕೂ ಹೆಚ್ಚು ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕೊಲ್ಲಲ್ಪಟ್ಟಿದ್ದರು ಎಂದು ಹೇಳಿದೆ.
ಪ್ರಧಾನಿ ಇಂದಿರಾ ಗಾಂಧಿ ಅವರು ಅಧಿಕಾರದಲ್ಲಿದ್ದಾಗ 1984ರ ಅಕ್ಟೋಬರ್ 31ರಂದು ಸಿಖ್ ವಿರೋಧಿ ಗಲಭೆಗಳು ಪ್ರಾರಂಭವಾಗಿತ್ತು. ಇದನ್ನು ನಿಯಂತ್ರಿಸುವ ವೇಳೆ ದೆಹಲಿಯಲ್ಲಿ ಸುಮಾರು 2,800 ಸಿಖ್ಖರು ಸೇರಿದಂತೆ ದೇಶಾದ್ಯಂತ 3,300 ಕ್ಕೂ ಹೆಚ್ಚು ಸಿಖ್ಖರು ಕೊಲ್ಲಲ್ಪಟ್ಟರು. ಇದರ ಬಳಿಕ ನವೆಂಬರ್ 1 ಅನ್ನು ಅಮೃತಸರದ ಅಕಾಲ್ ತಖ್ತ್ ಸಾಹಿಬ್ “ಸಿಖ್ ನರಮೇಧ ಸ್ಮರಣಾರ್ಥ ದಿನ” ಎಂದು ಘೋಷಿಸಿತ್ತು.








