ಇರಾನ್
ಇಸ್ರೇಲ್ ಹಾಗೂ ಅಮೆರಿಕಕ್ಕೆ ಕಠಿಣ ಮತ್ತು ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಖಮೇನಿ ಎಚ್ಚರಿಕೆ ನೀಡಿದ್ದಾರೆ. ಶತ್ರುಗಳ ಧೈರ್ಯಶಾಲಿ ಪ್ರಚೋದನೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದರು. ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ಖಮೇನಿ ಪ್ರತಿಕ್ರಿಯಿಸಿದ್ದಾರೆ.
ಜಾಗತಿಕ ತೈಲ ಮತ್ತು ಅನಿಲ ಸಾಗಣೆಗೆ ಪ್ರಮುಖ ಜಲಮಾರ್ಗವನ್ನು ಮುಚ್ಚುವುದು ಇನ್ನೂ ಅಂತಿಮವಾಗಿಲ್ಲ. ವಿಶ್ವದ ತೈಲ ಮತ್ತು ಅನಿಲದ ಸುಮಾರು 20 ಪ್ರತಿಶತವು ಹಾರ್ಮುಜ್ ಜಲಸಂಧಿಯ ಮೂಲಕ ಹೋಗುತ್ತದೆ. ಇರಾನಿನ ಶಾಸಕರು ಮತ್ತು ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್ ಎಸ್ಮಾಯಿಲ್ ಕೊಸಾರಿ, ಯಂಗ್ ಜರ್ನಲಿಸ್ಟ್ ಕ್ಲಬ್‌ಗೆ ಜಲಸಂಧಿಯನ್ನು ಮುಚ್ಚುವುದು ಕಾರ್ಯಸೂಚಿಯಲ್ಲಿದೆ ಮತ್ತು ಅಗತ್ಯವಿದ್ದಾಗಲೆಲ್ಲಾ ಮಾಡಲಾಗುತ್ತದೆ ಎಂದು ಹೇಳಿದರು.
ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿದ ಕೆಲವೇ ಘಂಟೆಗಳಲ್ಲಿ ಇರಾನ್ ದೇಶವು ಇಸ್ರೇಲ್ ವಿರುದ್ದ ದಾಳಿ ನಡೆಸಿದೆ. ಆಪರೇಷನ್ ರೈಸಿಂಗ್ ಲಯನ್ ಹೆಸರಿನಲ್ಲಿ ಇಸ್ರೇಲ್ ದೇಶವು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಯುದ್ಧ ಆರಂಭವಾಯಿತು. ಇರಾನ್ ಕೂಡಾ ಬಳಿಕ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದೀಗ ಯುದ್ಧಕ್ಕೆ ಅಮೆರಿಕ ಕೂಡಾ ಎಂಟ್ರಿಯಾಗಿದೆ. ಇರಾನ್ ನ ಮೂರು ಪರಮಾಣು ನೆಲೆಗಳ ಮೇಲೆ ಶನಿವಾರ ತಡರಾತ್ರಿ ಅಮೆರಿಕ ದಾಳಿ ನಡೆಸಿದೆ. ಫಾರ್ಡೋ, ನತಾಂಜ್, ಇಸ್ಫಹಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ.
ಇದು ಆರಂಭವಷ್ಟೇ, ಇನ್ನೂ ಕೆಲವು ಗುರಿಗಳು ಬಾಕಿ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೂಲಕ, ಇರಾನ್ ವಿರುದ್ಧ ಇಸ್ರೇಲ್ ಸಾರಿರುವ ಯುದ್ಧವನ್ನು ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ. ಇರಾನ್ ಮೇಲೆ ಭೀಕರ ದಾಳಿ ನಡೆಸಿದ ಕೆಲ ಹೊತ್ತಿನ ನಂತರ, ಮಾತನಾಡಿದ ಡೊನಾಲ್ಡ್ ಟ್ರಂಪ್,ರಾತ್ರೋರಾತ್ರಿ ನಡೆದ ದಾಳಿಗಳಲ್ಲಿ, ಇರಾನ್ ಪ್ರಮುಖ ಪರಮಾಣು ಘಟಕಗಳನ್ನು ನಾಶ ಮಾಡಿದ್ದೇವೆ. ಇದು ಸೇನೆಗೆ ಸಂದ ಅದ್ಭುತ ಯಶಸ್ಸು ಎಂದು ಹೇಳಿದರು.
ಇರಾನ್ ಮೇಲೆ ದಾಳಿ ಮಾಡಬೇಕೇ? ಬೇಡವೇ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂ.20ರಂದು 2 ವಾರಗಳ ಸಮಯ ಬಯಸಿದ್ದರು. ಆದರೆ, ಇದಾಗಿ ಎರಡೇ ದಿನದಲ್ಲಿ ಇರಾನ್‌ನ 3 ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಕೇವಲ 48 ಗಂಟೆ ಯಲ್ಲಿ ಬದಲಾದ ಟ್ರಂಪ್ ನಡೆಗೆ ಕಾರಣಗಳೇನು ಎಂಬ ಬಗ್ಗೆ ವಿಶ್ಲೇಷಣೆಗಳು ಶುರುವಾಗಿವೆ. ಇರಾನ್ ತನ್ನ ಪರಮಾಣುಗಳನ್ನು ಅಜ್ಞಾತ ಸ್ಥಳಗಳಿಗೆ ಸ್ಥಳಾಂತರಿಸುವುದನ್ನು ತಡೆಯಲು ಅಮೆರಿಕ ಈ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಜೂ.19 ಮತ್ತು 20ರಂದು ಫೋರ್ಡೋ ಅಣು ಸ್ಥಾವರದ ಬಳಿಯ ಅಸಾಮಾನ್ಯ ಚಟುವಟಿಕೆಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ಲಭ್ಯವಾಗಿದ್ದವು.
