ಖಾನಾಪುರ
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿದ ‘ಪ್ರವಾಹ್’ (Progressive River Authority For Water and Harmony) ತಂಡವು ಮಹದಾಯಿ ಜಲಾನಯನ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಮುಖ್ಯಸ್ಥ ಪಿ.ಎಂ.ಸ್ಕ್ವಾಟ್, ಸದಸ್ಯರಾದ ವೀರೇಂದ್ರ ಶರ್ಮಾ, ಮನೋಜ್ ತಿವಾರಿ, ನೀರಜ್ ಮಂಗಲಿಕ, ಮಿಲಿಂದ ನಾಯ್ಕ, ಸುಭಾಷಚಂದ್ರ, ಪ್ರಮೋದ ಬಾದಾಮಿ, ರಾಜೇಶ ಅಮ್ಮಿನಭಾವಿ ಅವರನ್ನು ಒಳಗೊಂಡ ತಂಡ ಬೆಳಿಗ್ಗೆ ಗೋವಾದ ಪಣಜಿಯಿಂದ ಹೊರಟಿತು.
ರಸ್ತೆ ಮಾರ್ಗವಾಗಿ ಬಂದ ಸದಸ್ಯರನ್ನು ಕರ್ನಾಟಕ–ಗೋವಾ ಗಡಿಯ ಚೋರ್ಲಾ ಬಳಿ ರಾಜ್ಯದ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಪೊಲೀಸರು ಸ್ವಾಗತಿಸಿದರು.
ಅಲ್ಲಿಂದ ಕಣಕುಂಬಿ ಅರಣ್ಯದ ಹಳತಾರಾ ನಾಲೆ, ಸುರ್ಲಾ ನಾಲೆ, ಕಳಸಾ ನಾಲೆಗೆ ತಂಡ ಭೇಟಿ ನೀಡಿ ಪರಿಶೀಲಿಸಿತು. ನಂತರ ಕಣಕುಂಬಿ ಪ್ರವಾಸಿ ಮಂದಿರಕ್ಕೆ ತೆರಳಿ ಸಭೆ ನಡೆಸಿತು. ಈ ವೇಳೆ ಕೇಂದ್ರದ ತಂಡಕ್ಕೆ ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು, ಯೋಜನೆ ಅನುಷ್ಠಾನದ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ಯೋಜನೆ ನಕ್ಷೆಯೊಂದಿಗೆ ವಿವರಿಸಿದ ಅವರು, ‘ಗೋವಾ ಆರೋಪಿಸುತ್ತಿರುವ ಪ್ರಕಾರ, ಯೋಜನೆ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಬಂಡೂರಿ ನಾಲೆ ಪ್ರದೇಶ, ನೇರಸೆ ಗ್ರಾಮಕ್ಕೆ ತಂಡದವರು ಭೇಟಿ ನೀಡಿ, ಬೆಳಗಾವಿ ತಲುಪಿದರು.
ಸ್ಥಳದಲ್ಲಿ ಪ್ರವಾಹ್ ತಂಡದೊಂದಿಗೆ ಆಗಮಿಸಿದ್ದ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ (ಕೆಎನ್‌ಎನ್‌ಎಲ್) ಎಂಡಿ ರಾಜೇಶ್ ಅಮ್ಮಿನಭಾವಿ ಮಾತನಾಡಿ, ಕಳಸಾ- ಬಂಡೂರಿ ತಿರುವು ಯೋಜನೆ ಪ್ರದೇಶಕ್ಕೆ 8 ಜನರ ತಂಡ ಭೇಟಿ ನೀಡಿದೆ. ಇಲ್ಲಿ ಏನೇನು ಕಾಮಗಾರಿ ನಡೆಯುತ್ತಿವೆ ಎಂದು ಪರಿಶೀಲಿಸಿದೆ. ಗೋವಾಕ್ಕೆ ಎರಡು ದಿನ, ಮಹಾರಾಷ್ಟ್ರಕ್ಕೆ ಎರಡು ದಿನ ಭೇಟಿ ಕೊಟ್ಟ ನಂತರ, ಕರ್ನಾಟಕಕ್ಕೆ ಬಂದಿದೆ. ಇದೊಂದು ಸಾಮಾನ್ಯ ಭೇಟಿ ಮಾತ್ರ ಎಂದು ಹೇಳಿದರು.
ಗೋವಾ ಸಿಎಂ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಆ ಬಗ್ಗೆ ನನಗೆ ಗೊತ್ತಿಲ್ಲ. ಇದು ಕಾಮಗಾರಿಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ತಂಡ ಅಲ್ಲ ಎಂದರು.ಬಳಿಕ ಈ ತಂಡದ ಭೇಟಿಯಿಂದ ನಮ್ಮ ರಾಜ್ಯಕ್ಕೆ ಅನುಕೂಲವಾಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸದೆ ಸ್ಥಳದಿಂದ ಕಾಲ್ಕಿತ್ತರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ