ನಿಮ್ಮ ಒಂದು ಮತವೂ ಅಮೂಲ್ಯ ಎಚ್ಚರಿಕೆಯಿದ ಚಲಾಯಿಸಿ : ಖರ್ಗೆ

ನವದೆಹಲಿ:

    ದೇಶದ 102 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ನಡುವಲ್ಲೇ ಎಚ್ಚರಿಕೆಯಿಂದ ಮತ ಚಲಾಯಿಸುವಂತೆ ಮತದಾರರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮನವಿ ಮಾಡಿಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಆರಂಭವಾಗಿದೆ ಎಂದು ಹೇಳಿದ್ದಾರೆ.

    ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ ಇಂದಿನಿಂದ ಪ್ರಾರಂಭವಾಗುತ್ತದೆ. ನನ್ನ ಪ್ರೀತಿಯ ನಾಗರಿಕರೇ, 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಎಚ್ಚರಿಕೆಯಿಂದ ಮತ ಚಲಾಯಿಸುವಂತೆ ನಾನು ವಿನಂತಿಸಿಕೊಳ್ಳುತ್ತೇನೆ.

    ಭಾರತದ ಭವಿಷ್ಯವನ್ನು ನಿರ್ಧರಿಸಲು ನೀವು ಇವಿಎಂನಲ್ಲಿ ಬಟನ್ ಒತ್ತುವುದಕ್ಕೂ ಮೊದಲು ಯೋಚಿಸಿ,ನಮ್ಮ ಸಂಸ್ಥೆಗಳು ಸರ್ವಾಧಿಕಾರದ ಮೂಲಕ ಬುಡಮೇಲು ಆಗಬೇಕೆಂದು ನೀವು ಬಯಸುತ್ತೀರಾ ಅಥವಾ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸುತ್ತೀರಾ? ನೀವೀಗ ಭಾರತದ ಭವಿಷ್ಯವನ್ನು ನಿರ್ಧರಿಸುವ ವ್ಯಕ್ತಿಯಾಗಿದ್ದೀರಿ ಎಂದು ಹೇಳಿದ್ದಾರೆ. 

    ಇದೇ ವೇಳೆ ನೂತನ ಮತದಾರರಿಗೆ ಆತ್ಮೀಯ ಸ್ವಾಗತ ಕೋರಿದ ಅವರು, ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ ಎಲ್ಲ ಮತದಾರರಿಗೆ ಆತ್ಮೀಯ ಸ್ವಾಗತ ಕೋರುತ್ತೇನೆ, ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಬನ್ನಿ ಎಂದು ತಿಳಿಸಿದ್ದಾರೆ.

    ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಉತ್ಸವ ಇಂದು ದೇಶದಲ್ಲಿ ಆರಂಭಗೊಂಡಿದ್ದು, 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದೆ. 

    ಮೊದಲ ಹಂತ ಮತದಾನವು ಅರುಣಾಚಲ ಪ್ರದೇಶ, ಅಸ್ಸೋಂ , ಬಿಹಾರ, ಛತ್ತೀಸ್​ಗಢ , ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ನಡೆಯುತ್ತಿದ್ದು, ಈ ಪೈಕಿ ತಮಿಳುನಾಡು, ಸಿಕ್ಕಿಂ, ನಾಗಾಲ್ಯಾಂಡ್, ಮಿಜೋರಾಂ, ಅರುಣಾಚಲ ಪ್ರದೇಶ, ಲಕ್ಷದ್ವೀಪ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

    2024ರ ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದೆ. ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ನಡೆಯುತ್ತಿರುವ ಎರಡನೇ ಅತಿ ದೀರ್ಘ ಮತದಾನ ಪ್ರಕ್ರಿಯೆಯಾಗಿದೆ ಇದಾಗಿದೆ. ಮೊದಲ ಲೋಕಸಭಾ ಚುನಾವಣೆಯೂ 1951 ಸೆಪ್ಟೆಂಬರ್​ನಿಂದ 1952ರ ಫೆಬ್ರವರಿ ನಡುವೆ ಐದು ತಿಂಗಳ ಕಾಲ ನಡೆದಿತ್ತು. 2019ರ ಸಾರ್ವತ್ರಿಕ ಚುನಾವಣೆಯೂ 7 ಹಂತಗಳಲ್ಲಿ ನಡೆದಿತ್ತು.

Recent Articles

spot_img

Related Stories

Share via
Copy link
Powered by Social Snap