ಮೋದಿ ಧ್ವಜಾರೋಹಣ ಹೇಳಿಕೆ : ಖರ್ಗೆ ವ್ಯಂಗ್ಯ

ನವದೆಹಲಿ:

      ಕೆಂಪುಕೋಟೆಯಲ್ಲಿ ಮತ್ತೆ ಧ್ವಜಾರೋಹಣ ಮಾಡುತ್ತೇನೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವ್ಯಂಗ್ಯವಾಡಿದ್ದಾರೆ.

   77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಕಾಂಗ್ರೆಸ್ ಪಕ್ಷ ಪ್ರಧಾನ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಇಂದು ಧ್ವಜಾರೋಹಣ ಮಾಡಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಮುಂದಿನ ವರ್ಷ ಧ್ವಜಾರೋಹಣ ಮಾಡುತ್ತಾರೆ. ಆದರೆ, ಅದು ಅವರ ಮನೆಯಲ್ಲಿ. ಮುಂದಿನ ವರ್ಷ ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ದೇಶದ ಸಾಧನೆಯ ಕುರಿತು ನಾನು ಮಾತನಾಡುತ್ತೇನೆಂದು ಹೇಳಿದರು.

    ಇದೇ ವೇಳೆ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲೇಕೆ ಭಾಗಿಯಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲನೆಯದಾಗಿ, ನನಗೆ ಸ್ವಲ್ಪ ಕಣ್ಣಿನ ಸಮಸ್ಯೆಗಳಿವೆ. ಎರಡನೆಯದಾಗಿ, ನಿಯಮಗಳ ಪ್ರಕಾರ ನಾನು 9.20 ಕ್ಕೆ ನನ್ನ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿತ್ತು. ಇದೇ ಸಮಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸಬೇಕಿತ್ತು. ಹಾಗಾಗಿ ಕೆಂಪುಕೋಟೆಗೆ ತೆರಳಲು ಸಾಧ್ಯವಾಗಲಿಲ್ಲ. ಪ್ರಧಾನಿ ಮೋದಿ ಹೋಗುವುದಕ್ಕೂ ಮುನ್ನ ಬೇರೆಯವರನ್ನು ಒಳ ಹೋಗಲು ಅನುಮತಿ ನೀಡುವುದಿಲ್ಲ. ಅಷ್ಟರ ಮಟ್ಟಿಗೆ ಸೆಕ್ಯುರಿಟಿ ಬಿಗಿಯಾಗಿರುತ್ತದೆ…ಸಮಯಕ್ಕೆ ಸರಿಯಾಗಿ ಇಲ್ಲಿಗೆ ತಲುಪಲು ಆಗುವುದಿಲ್ಲ ಎಂದುಕೊಂಡೆ… ಭದ್ರತೆಯ ಪರಿಸ್ಥಿತಿಯಿಂದಾಗಿ ಅಲ್ಲಿಗೆ ಹೋಗದೆ ಇರುವುದೇ ಒಳಿತು ಎಂದುಕೊಂಡೆ ಎಂದು ತಿಳಿಸಿದರು.
    ಕಾಂಗೆಸ್ ಸಂಸದ ಕೆಸಿ ವೇಣುಗೋಪಾಲ್ ಮಾತನಾಡಿ, 2024ರ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರಬೇಕು, ಯಾರು ಸೋಲಬೇಕೆಂಬುದನ್ನು ಜನರು ನಿರ್ಧರಿಸುತ್ತಾರೆ. 2024ರವರೆಗಾದರೂ ಕಾಯೋಣ ಎಂದು ಹೇಳಿದ್ದಾರೆ.
    ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ್ದ ಖರ್ಗೆಯವರು,  ಮಾಜಿ ಪ್ರಧಾನಿ ನೆಹರೂ ಅವರು ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಿದರು, ಸಾರ್ವಜನಿಕ ವಲಯದ ಘಟಕಗಳನ್ನು ರಚಿಸಿದರು, ರಾಷ್ಟ್ರದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರು. ಅವರು ಐಐಟಿಗಳು, ಐಐಎಂಗಳು, ಎಐಐಎಂಎಸ್, ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋವನ್ನು ಸ್ಥಾಪಿಸಿದರು ಮತ್ತು ದೇಶದಲ್ಲಿ ಪರಮಾಣು ಸಂಶೋಧನೆಗೆ ಅಡಿಪಾಯ ಹಾಕಿದರು ಎಂದು ಸ್ಮರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap