ಇಸ್ಲಾಮಾಬಾದ್:
ಸದಾ ಒಂದಲ್ಲ ಒಂದು ರೀತಿಯ ಹೇಳಿಕೆಯಿಂದ ಅಪಹಾಸ್ಯಕ್ಕೆ ಗುರಿಯಾಗುತ್ತಿರುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ವಿಲಕ್ಷಣ ಹೇಳಿಕೆ ನೀಡಿ ಸುದ್ದಿಯಲ್ಲಿದೆ. ಭ್ರಷ್ಟಾಚಾರದಿಂದಾಗಿ ದೇಶಕ್ಕೆ ಅಪಖ್ಯಾತಿ ಬರುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾತಾನಾಡಿರುವ ಅವರು, ಭ್ರಷ್ಟಾಚಾರದ ಕಾರಣದಿಂದಾಗಿ ಪಾಕಿಸ್ತಾನದ ಪ್ರತಿಷ್ಠೆಗೆ ಧಕ್ಕೆಯಾಗಿದೆ. ರಾಜಕೀಯ ನಿಧಿಯ ನೆಪದಲ್ಲಿ ಅಮೆರಿಕವು ಅಂತಹ ಪದ್ಧತಿಗಳನ್ನು ಪ್ರಚೋದಿಸುತ್ತಿದೆ. ಅಮೆರಿಕವು ಇಸ್ರೇಲ್ ನಿಂದ ಬಹಿರಂಗವಾಗಿ ಲಂಚ ಪಡೆಯುತ್ತಿದೆ ಎಂದು ಆರೋಪಿಸಿದರು.
ಲಂಚ ಪಡೆದಿರುವುದಕ್ಕೆ ನಮಗೆ ಅಪಖ್ಯಾತಿ ಬರುತ್ತಿದೆ. ಆದರೆ ಅಮೆರಿಕದ ರಾಜಕಾರಣಿಗಳು ಇಸ್ರೇಲ್‌ನಿಂದ ಬಹಿರಂಗವಾಗಿ ಲಂಚ ಪಡೆಯುತ್ತಿದ್ದಾರೆ. ನಾನು ಲಂಚ ತೆಗೆದುಕೊಳ್ಳಬೇಕಾದರೆ ಅದನ್ನು ಎಲ್ಲೋ ಒಂದು ಹಿಂಬದಿ ಕೋಣೆಯಲ್ಲಿ ಮಾಡುತ್ತೇನೆ ಎಂದು ಆಸಿಫ್ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಭ್ರಷ್ಟಾಚಾರದ ಕಾರಣ ಪಾಕಿಸ್ತಾನದ ಪ್ರತಿಷ್ಠೆಯನ್ನು ಅನ್ಯಾಯವಾಗಿ ಕೆಣಕಲಾಗಿದೆ ಎಂದು ವಾದಿಸಿರುವ ಆಸಿಫ್, ಇಸ್ಲಾಮಾಬಾದ್ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೂ ರಾಜಕೀಯ ನಿಧಿಯ ನೆಪದಲ್ಲಿ ಅಮೆರಿಕವು ಅಂತಹ ಪದ್ಧತಿಗಳನ್ನು ಪ್ರಚೋದಿಸುತ್ತಿದೆ ಎಂದು ಹೇಳಿದರು.
ಆಗಸ್ಟ್ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪೋರ್ಚುಗಲ್‌ಗೆ ತೆರಳಲು ಕಪ್ಪು ಹಣವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದ ಆಸಿಫ್ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಹಿರಿಯ ಅಧಿಕಾರಿಗಳು ಪಾಕಿಸ್ತಾನದಿಂದ ಕಪ್ಪು ಹಣವನ್ನು ಸಾಗಿಸುತ್ತಿದ್ದಾರೆ ಎಂದು ಎಕ್ಸ್ ನಲ್ಲಿ ಬರೆದಿದ್ದ ಅವರು, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರೊಂದಿಗೆ ಸಂಪರ್ಕ ಹೊಂದಿದ್ದ ಸಹಾಯಕರನ್ನು ನೇರವಾಗಿ ಟೀಕಿಸಿದ್ದರು.
ಕಳೆದ ಜೂನ್‌ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭ್ರಷ್ಟಾಚಾರ ವಿಚಾರಣೆಯನ್ನು ಎದುರಿಸಿದರು. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದರು.








