ನವದೆಹಲಿ:
ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಇದೀಗ ದೆಹಲಿಯ ಪ್ರೆಸ್ ಎನ್‌ಕ್ಲೇವ್ ಸೊಸೈಟಿಯಲ್ಲಿ ನಡೆಯುತ್ತಿದ್ದ ನಿಯಮಿತ ಭದ್ರತಾ ತಪಾಸಣೆ ವೇಳೆ ಸೆಕ್ಯುರಿಟಿ ಗಾರ್ಡ್ ವಸತಿ ಕಾಲೋನಿಯಿಂದ ಇನ್ವರ್ಟರ್‌ಗಳನ್ನು ಕದಿಯುವ ಕಳ್ಳನನ್ನು ಗುರುತಿಸಿ ಹಿಡಿಯಲು ಪ್ರಯತ್ನಿಸಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಪ್ರೆಸ್ ಎನ್‌ಕ್ಲೇವ್‌ನ ಭದ್ರತಾ ಮುಖ್ಯಸ್ಥರಿಂದ ಪಡೆದ ವಿಡಿಯೊ ದೃಶ್ಯಾವಳಿಯಲ್ಲಿ, ಸಮೀಪದಲ್ಲಿ ಬೀಡುಬಿಟ್ಟಿದ್ದ ಸೆಕ್ಯುರಿಟಿ ಗಾರ್ಡ್ ಪ್ರವಾಕರ್ ಮತ್ತು ಪ್ರತೀಕ್ ತಮಾಂಗ್ ಆರೋಪಿಯನ್ನು ಹಿಡಿಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ವಿಡಿಯೊದಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ಸೆಕ್ಯುರಿಟಿ ಗಾರ್ಡ್ ಸೊಸೈಟಿಯ ಪ್ರವೇಶ ದ್ವಾರದಲ್ಲಿ ಪರಿಶೀಲನೆಗಾಗಿ ತಡೆದ್ದನು. ಆ ವ್ಯಕ್ತಿಯ ಮುಖವನ್ನು ನೋಡಿದ ಗಾರ್ಡ್ ಪ್ರವಾಕರ್ ಆತ ಈ ಹಿಂದೆ ಎರಡು ಬಾರಿ ಇನ್ವರ್ಟರ್ ಕದ್ದ ಆರೋಪಿಯೆಂದು ತಿಳಿದು ಅವನನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಆಗ ಆರೋಪಿ ಅವನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ತಕ್ಷಣ ಇನ್ನೊಬ್ಬ ಸೆಕ್ಯುರಿಟಿ ಗಾರ್ಡ್ ಬಂದು ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಆದರೆ ಕೊನೆಗೂ ಆತ ಅವರಿಂದ ತಪ್ಪಿಸಿಕೊಂಡು ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.
ಗಾರ್ಡ್‌ಗಳಾದ ಪ್ರವಾಕರ್ ತಮಂಗ್ ಮತ್ತು ಪ್ರತೀಕ್ ತಮಂಗ್ ಇಬ್ಬರೂ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ (ಮಿರಿಕ್) ಮೂಲದವರು ಮತ್ತು ಐಪಿಆರ್‌ಎ ಸೆಕ್ಯುರಿಟಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಾರೆ. ಪ್ರೆಸ್ ಎನ್‌ಕ್ಲೇವ್ ನಿವಾಸಿಗಳು ಅವರ ಕಾರ್ಯವನ್ನು ಹೊಗಳಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ಶುರುಮಾಡಿದ್ದಾರೆ.
ದೆಹಲಿಯಲ್ಲಿ ಕಳ್ಳತನ ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಕಳ್ಳರ ಗುಂಪೊಂದು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಮನೆಯ ಹೊರೆಗ ಪಾರ್ಕ್ ಮಾಡಿದ್ದ ಹುಂಡೈ ಕ್ರೆಟಾವನ್ನು ಇತ್ತೀಚೆಗೆ ಕಳ್ಳತನ ಮಾಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಕಾರಿನ ಮಾಲೀಕ ರಿಷಭ್ ಚೌಹಾಣ್ ಸೋಶಿಯಲ್ ಮೀಡಿಯಾಗಳಲ್ಲಿ ಕಾರು ಕಳ್ಳತನ ಮಾಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.








