ಬೆಂಗಳೂರು:
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ವಿರೋಧಿಸಿದ ನಂತರ ಅಪರಿಚಿತ ವ್ಯಕ್ತಿಗಳು ಬಯೋಕಾನ್ ನಾಮಫಲಕಕ್ಕೆ ಕಪ್ಪು ಬಣ್ಣವನ್ನು ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತರ ಹಲವು ಉದ್ಯಮ ನಾಯಕರು ಮತ್ತು ಐಟಿ ಉದ್ಯಮಿಗಳು ಕೂಡ ಮಸೂದೆಯನ್ನು ವಿರೋಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಬಯೋಕಾನ್ ಲೋಗೊಗಳು ಮತ್ತು ಹೆಸರಿನ ಮೇಲೆ ಕಪ್ಪು ಬಣ್ಣ ಬಳಿದಿರುವುದನ್ನು ತೋರಿಸುತ್ತದೆ, ಆದರೆ ಸ್ಥಳದ ಬಗ್ಗೆ ಯಾವುದೇ ಖಚಿತತೆ ಇಲ್ಲ. ಕನ್ನಡ ಪರ ಸಂಘಟನೆಯೊಂದು ಬಣ್ಣ ಬಳಿದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಕೈಗಾರಿಕೆಗಳು ಮತ್ತು ಉದ್ಯಮಿಗಳಿಂದ ಹಿನ್ನಡೆಯನ್ನು ಎದುರಿಸಿದ ನಂತರ, ಕರ್ನಾಟಕ ಸರ್ಕಾರ ಬುಧವಾರ ಮೀಸಲಾತಿ ಮಸೂದೆಯನ್ನು ತಡೆಹಿಡಿಯಿತು. ಮೊನ್ನೆ ಸೋಮವಾರ, ಮಸೂದೆಯನ್ನು ಸಂಪುಟದಲ್ಲಿ ಅಂಗೀಕರಿಸಲಾಗಿತ್ತು. ಖಾಸಗಿ ಕಂಪನಿಗಳಲ್ಲಿನ ಎಲ್ಲಾ ಆಡಳಿತಾತ್ಮಕ ಉದ್ಯೋಗಗಳಲ್ಲಿ ಶೇ.50 ಮತ್ತು ಎಲ್ಲಾ ಆಡಳಿತಾತ್ಮಕವಲ್ಲದ ಉದ್ಯೋಗಗಳಲ್ಲಿ ಶೇ.70 ರಷ್ಟು ಸ್ಥಳೀಯರಿಗೆ ಮೀಸಲಿಡಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ “ಟೆಕ್ ಕೇಂದ್ರವಾಗಿ ನಮಗೆ ನುರಿತ ಪ್ರತಿಭೆಗಳ ಅಗತ್ಯವಿದೆ ಮತ್ತು ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸುವ ಗುರಿಯೊಂದಿಗೆ ತಂತ್ರಜ್ಞಾನದಲ್ಲಿ ನಮ್ಮ ಪ್ರಮುಖ ಸ್ಥಾನದ ಮೇಲೆ ಪರಿಣಾಮ ಬೀರಬಾರದು ಎಂದು ಹೇಳಿದ್ದರು. ಈ ಮಧ್ಯೆ ಫೋನ್‌ಪೇ ಸಂಸ್ಥಾಪಕರು ಮೀಸಲಾತಿ ಮಸೂದೆಯನ್ನು ಟೀಕಿಸಿದ ನಂತರ ಕರ್ನಾಟಕದಲ್ಲಿ “ಫೋನ್‌ಪೇ ಬಹಿಷ್ಕರಿಸಿ” ಟ್ರೆಂಡಿಂಗ್ ಆಗಿದೆ.