ನವದೆಹಲಿ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ , ಕೇಂದ್ರ ಸರ್ಕಾರ ಪ್ರಾರಂಭಿಸಿದ ಯೋಜನೆಯಾಗಿದ್ದು, ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6,000ರೂ. ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2,000 ರೂ.ಯಂತೆ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಈವರೆಗೆ 20ಕಂತುಗಳಲ್ಲಿ ರೈತರ ಖಾತೆಗೆ ಹಣ ಪಾವತಿ ಮಾಡಲಾಗಿದೆ. ಇದೀಗ ಸದ್ಯದಲ್ಲೇ ಪಿಎಂ ಕಿಸಾನ್ ಯೋಜನೆಯ 21ನೇ ಕಂತು ಬಿಡುಗಡೆ ಆಗುತ್ತಿದೆ.
ಆದರೆ ಈ ಮಧ್ಯೆ ಕೇಂದ್ರ ಸರ್ಕಾರ ಮಹತ್ತರವಾದ ಸೂಚನೆಯೊಂದನ್ನು ನೀಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಲಾಭ ಪಡೆಯಲು ರೈತರು ತಮ್ಮ ವೈಯಕ್ತಿಕ ಹಾಗೂ ಕೃಷಿ ವಿವರಗಳನ್ನು ಒಂದು ವಾರದೊಳಗೆ ನವೀಕರಿಸಬೇಕೆಂದು ತ್ರಿಚಿ ಮತ್ತು ಡೆಲ್ಟಾ ಜಿಲ್ಲಾಡಳಿತಗಳು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಇಲ್ಲಿಯವರೆಗೆ ಕೇವಲ ಶೇ. 25ರಿಂದ ಶೇ. 30ರಷ್ಟು ರೈತರು ಇನ್ನೂ ಈ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಇವರು ಪಿಎಂ ಕಿಸಾನ್ ಯೋಜನೆ ನೋಂದಣಿಯಾಗಿದ್ದರೂ ಸಹ, ಈ ಮಾಹಿತಿಯನ್ನು ಪೂರ್ಣಗೊಳಿಸದಿದ್ದರೆ 21ನೇ ಕಂತು ಸ್ಥಗಿತಗೊಳ್ಳಬಹುದು ಎಂದಿದೆ.
ಕೃಷಿ ಇಲಾಖೆಯು ‘Agri Stack’ ತಂತ್ರಾಂಶದ ಮೂಲಕ ರೈತರ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುತ್ತಿದೆ. ಈ ಕ್ರಮದಿಂದ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ವಿಳಂಬ ತಪ್ಪಿ, ಸಮಯಕ್ಕೆ ಸರಿಯಾಗಿ ರೈತರ ಖಾತೆಗೆ ಮೊತ್ತ ವರ್ಗಾಯಿಸಲು ಸಾಧ್ಯವಾಗಲಿದೆ. ಜಿಲ್ಲಾಧಿಕಾರಿಗಳು ರೈತರಿಗೆ ತಮ್ಮ ಮಾಹಿತಿಯನ್ನು ನವೀಕರಿಸಲು ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಅಥವಾ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSCs) ಭೇಟಿ ನೀಡಲು ಸಲಹೆ ನೀಡಿದ್ದಾರೆ. ತಮ್ಮ ವಿವರಗಳನ್ನು ನವೀಕರಿಸಿದ ರೈತರಿಗೆ ಮಾತ್ರ ಮುಂದಿನ PM-KISAN ಕಂತುಗಳು ಲಭ್ಯವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾಹಿತಿ ಇಲ್ಲದಿದ್ದರೆ 21ನೇ ಕಂತಿನ ಹಣ ನಿಮ್ಮ ಕೈ ಸೇರುವುದಿಲ್ಲ.
ಇದರೊಂದಿಗೆ PM-KISAN ಯೋಜನೆಯ ಫಲಾನುಭವಿಗಳಿಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರವು ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದರೂ, ಇನ್ನೂ ಅನೇಕ ರೈತರು ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಇ-ಕೆವೈಸಿ ಮಾಡದಿದ್ದರೆ ಮುಂದಿನ ಕಂತು ಬಿಡುಗಡೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಫಲಾನುಭವಿಯ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಮತ್ತು ಭೂ ದಾಖಲೆಗಳ ಪರಿಶೀಲನೆ ಕೂಡ ಕಡ್ಡಾಯ. ಈ ಕ್ರಮಗಳನ್ನು ಪೂರೈಸದ ರೈತರಿಗೆ ಹಣ ವರ್ಗಾವಣೆ ತಡೆಗೊಳ್ಳಲಿದೆ.








