“ಬರಡು ಎಮ್ಮೆ, ಕೋಣ, ಹಸುಗಳನ್ನು ಡಿಸಿ ಕಚೇರಿಗೆ ಬಿಡ್ತೀವಿ’’ – KNR ಗರಂ

 ತುಮಕೂರು :

      ರಾಜ್ಯ ಬಿಜೆಪಿ ಸರಕಾರ ಮತಗಳಿಕೆಯ ದೃಷ್ಟಿಯ್ನನರಿಸಿಕೊಂಡು ಹಿಂದೂ ಧಾರ್ಮಿಕ ಭಾವನೆಯನ್ನು ಕೆರಳಿಸಿ ಅವೈಜ್ಞಾನಿಕವಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದ್ದು ಇದರಿಂದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಬುಡಮೇಲಾಗಲಿದೆ. ಇದರ ವಿರುದ್ಧ ಕಾಂಗ್ರೆಸ್ ತುಮಕೂರಿನಿಂದಲೇ ವಿನೂತನ ಹೋರಾಟ ಆರಂಭಿಸಲಿದ್ದು, ಬರಡು ಎಮ್ಮೆ ಕೋಣ ಹಸುಗಳನ್ನು ಟೌನ್‍ಹಾಲ್ ವೃತ್ತಕ್ಕೆ ತರಿಸಿ, ಜಿಲ್ಲಾಧಿಕಾರಿ ಕಚೇರಿಗೆ ತೆಗೆದುಕೊಂಡು ಹೋಗಿ ಬಿಡಲಾಗುವುದು ಎಂದು ಕಾಂಗ್ರೆಸ್ ಮಾಜಿ ಶಾಸಕ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

    ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರದ ನಿರ್ದೇಶನದಂತೆ ಬಿಜೆಪಿ ಸರಕಾರ ಅವೈಜ್ಞಾನಿಕ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಇವರು ಹೊಸದಾಗಿ ಮಾಡಬೇಕಿಲ್ಲ. 1964ರಿಂದಲೇ ಅಸ್ಥಿತ್ವದಲ್ಲಿ ಇದೆ. ಹಾಲು ಕೊಡದೇ ರೈತನಿಗೆ ಸಾಕಲು ಹೊರೆಯಾದ ಹಸು, ಎಮ್ಮೆ, ಕೋಣಗಳನ್ನು ಆತ ಏನು ಮಾಡಬೇಕು ಸಂತೆ, ಜಾತ್ರೆಗಳಲ್ಲಿ ಬಹುತೇಕ ವಯಸ್ಸಾದ ರಾಸುಗಳನ್ನು ಕಸಾಯಿಖಾನೆಗೆ ಖರೀದಿಸುವ ಪ್ರಕ್ರಿಯೆ ಹಿಂದಿನಿಂದಲೂ ಇದೆ. ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸದೆ ಬರೀ ಧಾರ್ಮಿಕ ಭಾವನೆ, ಮತಗಳಿಕೆಗಾಗಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಡುವುದು ಸರಿಯಲ್ಲ. ಇದರ ವಿರುದ್ಧ ಪ್ರಬಲ ಹೋರಾಟ ರೂಪಿಸಲು ಚಿಂತನೆ ನಡೆಸಿದೆ ಎಂದರು.

ಕಂದಾಯ ಸಚಿವರ ಹೇಳಿಕೆಯಂತೆ ಡಿಸಿ ಕಚೇರಿಗೆ ಬಿಡುತ್ತೇವೆ:

      ಸಾಕಲಾಗದ ಬರಡು ಹಸು, ಕರು, ಎಮ್ಮೆ ಕೋಣಗಳನ್ನು ನಮಗೆ ತಂದು ಬಿಡಿಯೆಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. ಅವರ ಹೇಳಿಕೆಯಂತೆಯೇ ತುಮಕೂರಿನಲ್ಲೇ ಮೊದಲ್ಗೊಂಡು ರಾಜ್ಯಾದ್ಯಂತ ಅಶಕ್ತ ಹಸು, ಎಮ್ಮೆ, ಕರು, ಕೋಣಗಳನ್ನು ಕಂದಾಯ ಜಿಲ್ಲಾಧಿಕಾರಿಗಳ ಕಚೇರಿಗೆ ಬಿಡುತ್ತೇವೆ. ಈ ಹೋರಾಟಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಕರೆಸುವುದಾಗಿ ತಿಳಿಸಿದರು.

ಮೋದಿ ಅವರ ಸರಕಾರದಲ್ಲೇ ಗೋಮಾಂಸ ರಫ್ತು ದುಪ್ಪಟ್ಟು:

      ಹಿಂದಿನ ಸರಕಾರಗಳಿಗಿಂತಲೂ ಹೆಚ್ಚು ಗೋ ಮಾಂಸ ರಫ್ತು ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ನಡೆದಿದೆ ಎಂದ ಅವರು ಅತೀ ಹೆಚ್ಚು ಗೋಮಾಂಸ ರಫ್ತುದಾರರ ಪಟ್ಟಿಯಲ್ಲೇ ಬಿಜೆಪಿಯವರೇ ಇದ್ದಾರೆ. ಬರೀ ಉತ್ತರಪ್ರದೇಶ, ಕರ್ನಾಟಕದಲ್ಲಿ ಮಾತ್ರ ಏಕೆ ಗೋ ಹತ್ಯೆ ಕಾಯ್ದೆ ಜಾರಿಗೆ ಬಿಜೆಪಿ ಮುಂದಾಗಿದೆ. ಕೇಂದ್ರ ಸರಕಾರದ ಅವರದ್ದೇ ಇರುವಾಗ ಇಡೀ ರಾಷ್ಟ್ರದಲ್ಲಿ ಜಾರಿಗೆ ತರಬಹುದಿತ್ತಲ್ಲ ಎಂದು ಪ್ರಶ್ನಿಸಿದ ಅವರು ಈಶಾನ್ಯ ರಾಜ್ಯಗಳಲ್ಲಿ ಗೋಮಾಂಸ ಭಕ್ಷಣೆಯೇ ಹೆಚ್ಚಿದೆ. ಆಹಾರ ಪದ್ದತಿಯನ್ನು ಕಾಯ್ದೆಯ ಮೂಲಕ ಕಿತ್ತುಕೊಳ್ಳಲು ಸರಕಾರಗಳಿಗೆ ಸಾಧ್ಯವಿಲ್ಲ. ಮುಂದೆ ಇದೇ ಕಾಯ್ದೆ ಜಾರಿಯಿಂದ ಬಿಜೆಪಿಯವರೇ ಭ್ರಮ ನಿರಸನಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

ಗ್ರಾಪಂಗೆ ಯೋಗ್ಯ ಅಭ್ಯರ್ಥಿಗಳ ಆಯ್ಕೆ ಮತದಾರರ ಜವಾಬ್ದಾರಿ:

     ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷರಹಿತವಾದರೂ ಪಕ್ಷದ ವಾಸನೆಯಿಂದ ಹೊರತಾಗಿಲ್ಲ ಎಂದು ಕೆ.ಎನ್.ರಾಜಣ್ಣ ಅವರು ತಮಗೆ ಮಧುಗಿರಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಉಸ್ತುವಾರಿ ವಹಿಸಿದ್ದು, ಸ್ವಕ್ಷೇತ್ರ ಮಧುಗಿರಿಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿ ಕಣಕ್ಕಿಳಿಯಲು ಸ್ಪರ್ಧಾಕಾಂಕ್ಷಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರೂ ನಮ್ಮವರೇ ಆದ್ದರಿಂದ ಸ್ಥಳೀಯವಾಗಿ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಲು ಸೂಚಿಸಲಾಗಿದೆ. ಗ್ರಾಮಾಂತರದಲ್ಲಿ ಬಿಜೆಪಿ-ಜೆಡಿಎಸ್ ಪ್ರಬಲವಾಗಿದ್ದು, ಕಾಂಗ್ರೆಸ್ ಬಲವರ್ಧನೆಯಾಗಬೇಕೆಂಬುದು ವಾಸ್ತವ. ಪಂಚಾಯಿತಿ ಚುನಾವಣೆಯಲ್ಲಿ ಆದಷ್ಟು ಅವಿರೋಧ ಆಯ್ಕೆ ನಡೆದರೆ ಗ್ರಾಮಕ್ಕೂ ಒಳಿತಾಗಲಿದೆ. ಆದರೆ ಸ್ಥಾನಗಳನ್ನು ದುಡ್ಡಿಗೆ ಹರಾಜು ಹಾಕುವುದು ಅತ್ಯಂತ ಕೆಟ್ಟ ಬೆಳವಣಿಗೆ. ಮಧುಗಿರಿ, ಗುಬ್ಬಿ, ತುಮಕೂರು ಗ್ರಾಮಾಂತರದಲ್ಲಿ ಪ್ರವಾಸ ಮಾಡಿದ್ದು, ಕೆಲವು ಕಡೆ ಅವಿರೋಧ ಆಯ್ಕೆ ಮಾಡಿಸಲಾಗಿದೆ.ಮತದಾರರು ಹಣಕ್ಕೆ ಮತ ಮಾರಿಕೊಂಡರೆ ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಕಳೆದ ಉಪಚುನಾವಣೆಗಳಲ್ಲಿನ ಹಣದ ಹರಿವನ್ನು ನೋಡಿದರೆ ಮಾನ ಮರ್ಯಾದೆ ಹೊಂದಿರುವವರು ಚುನಾವಣೆಗೆ ನಿಲ್ಲದಿರುವುದೇ ಒಳಿತು ಎಂಬಷ್ಟು ಬೇಸರವಾಗುತ್ತದೆ ಎಂದರು.

      ಕೃಷಿ ಕಾಯ್ದೆಗಳ ಜಾರಿ ಪರಿಣಾಮ ಪಂಚಾಯಿತಿ ಚುನಾವಣೆ ಮೇಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ.ಎನ್.ರಾಜಣ್ಣ ಅವರು ಯಾವುದೇ ಕಾಯ್ದೆ ಜಾರಿಗೊಂಡ ಕೆಲ ತಿಂಗಳುಗಳ ಬಳಿಕವಷ್ಟೇ ಅದರ ದುಷ್ಪರಿಣಾಮ, ಸತ್ಪರಿಣಾಮಗಳ ಪರಿಣಾಮ ಜನಸಾಮಾನ್ಯರಿಗೆ ಅರಿವಾಗಲಿದೆ. ಬಿಜೆಪಿಯವರು ಶೇ.80ರಷ್ಟು ಗ್ರಾಪಂ ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದು, ಎಲ್ಲಾ ಪಕ್ಷದವರು ತಾವೇ ಗೆಲ್ಲುವುದಾಗಿ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಆ ಪರಿಸ್ಥಿತಿ ಇಲ್ಲ. ಗ್ರಾಮ ಮಟ್ಟದ ಅಭಿವೃದ್ಧಿ ಚಿಂತನೆ, ಸದಸ್ಯರ ಆಯ್ಕೆಯ ಮಾನದಂಡವೇ ಬೇರೆ ಇರಲಿದೆ ಎಂದರು.

ಪರಿಷತ್ ಘಟನೆ ಹಿಂದೆ ನಾಯಕರ ಕುಮ್ಮಕ್ಕು!

     ವಿಧಾನ ಪರಿಷತ್‍ನಲ್ಲಿ ಮಂಗಳವಾರ ನಡೆದ ಘಟನೆ ಖಂಡನೀಯವಾಗಿದ್ದು, ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತಹುದಲ್ಲ. ಘಟನೆಯ ಬಗ್ಗೆ ಮೂರು ಪಕ್ಷಗಳ ಸದಸ್ಯರನ್ನು ಧೂಷಿಸಲಾಗುತ್ತಿದೆ. ಆದರೆ ಘಟನೆ ನಡೆದರೆ ಸದಸ್ಯರೇ ಈ ರೀತಿ ವರ್ತಿಸಲು ಸಾಧ್ಯವಿಲ್ಲ.

     ಸಭಾಪತಿಯಿರುವಾಗ ಉಪಸಭಾಪತಿ ಸಭಾಪತಿ ಸ್ಥಾನ ಅಲಂಕರಿಸಿದ್ದು, ಇದೆಲ್ಲದರ ಹಿಂದೆ ಕೆಲವು ನಾಯಕರ ಕುಮ್ಮಕ್ಕಿದೆ. ನಾಯಕರ ಬೆಂಬಲವಿಲ್ಲದೆ ಈ ರೀತಿಯ ವರ್ತನೆ ಸಾಧ್ಯವಿಲ್ಲ. ನಿಯಮಾವಳಿ ಪ್ರಕಾರ ಬೆಲ್ ಹೊಡೆದ ಬಳಿಕ ಸದನದ ಬಾಗಿಲು ಮುಚ್ಚಲಾಗುತ್ತದೆ. ಮುಂಚೆಯೇ ಬಾಗಿಲು ಮುಚ್ಚಿ ಸಭಾಪತಿಯನ್ನೇ ಒಳಗೆ ಬಿಡದಿದ್ದರೆ ಹೇಗೆ? ಇದರ ಹಿಂದಿನ ಷಡ್ಯಂತ್ರವೇನು ಎಂಬುದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳದಿರುವಷ್ಟು ದಡ್ಡರಲ್ಲ. ಸದಸ್ಯರ ದುಂಡಾವರ್ತಿಗೆ ಕೆಲನಾಯಕರ ಕುಮ್ಮಕ್ಕೇ ಕಾರಣ ಎಂದು ಪುನರುಚ್ಚರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap