ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆಯಲು ಕೆ.ಎನ್.ಆರ್. ಸಲಹೆ

ತುಮಕೂರು : 

      ಕೊರೊನಾ ಎರಡನೇ ಅಲೆ ಎಲ್ಲಾ ಕಡೆಗೂ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಕರೆ ನೀಡಿದರು.

      ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ನಂತರ ಮಾತನಾಡಿದ ಅವರು ನಾನು ಈಗಾಗಲೇ ಮೊದಲನೇ ಬಾರಿಗೆ ಕಳೆದ ತಿಂಗಳು ಲಸಿಕೆ ಹಾಕಿಸಿಕೊಂಡಿದ್ದೆ. ಈಗ ಎರಡನೇ ಡೋಸ್ ಹಾಕಿಸಿಕೊಳ್ಳುತ್ತಿದ್ದೇನೆ. ಮೊದಲನೇ ಡೋಸ್ ನಂತರ 28 ದಿನಗಳಿಗೆ 2ನೇ ಡೋಸ್ ಹಾಕಿಸಿಕೊಳ್ಳಬೇಕೆಂಬ ವೈದ್ಯಕೀಯ ಸಲಹೆಯಂತೆ ನಾನು ಪಾಲನೆ ಮಾಡಿದ್ದೇನೆ. ಎರಡು ಬಾರಿ ಲಸಿಕೆ ಹಾಕಿಸಿಕೊಂಡಾಗಲೂ ನನಗೆ ಯಾವ ರೀತಿಯ ತೊಂದರೆಯೂ ಎದುರಾಗಿಲ್ಲ. ಕೆಲವರು ಲಸಿಕೆ ಹಾಕಿಸಿಕೊಳ್ಳದಂತೆ ಹೇಳಿ ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹವರ ಮಾತುಗಳಿಗೆ ಗಮನ ಕೊಡಬೇಡಿ, ಯಾವುದೇ ಭಯಕ್ಕೆ ಒಳಗಾಗದೆ ಲಸಿಕೆಹಾಕಿಸಿಕೊಳ್ಳಿ ಎಂದರು.

      ಕೊರೊನಾ ಲಸಿಕೆಯಿಂದ ಒಳ್ಳೆಯದು ಆಗುತ್ತದೆಯೇ ಹೊರತು ಅದರಿಂದ ಅನಾನುಕೂಲವೇನೂ ಇಲ್ಲ. ಇದೀಗ ಎರಡನೇ ಅಲೆ ಎಲ್ಲ ಕಡೆಗೆ ಹರಡುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಎಲ್ಲರನ್ನೂ ಪ್ರೇರೇಪಿಸುವಂತೆ ಅವರು ಕರೆ ನೀಡಿದರು.

      ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕಾದ ಅಗತ್ಯವಿದೆ. ಅನಿವಾರ್ಯ ಮತ್ತು ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಇತರೆ ಸಂದರ್ಭಗಳಲ್ಲಿ ಹೆಚ್ಚು ಜನ ಸೇರುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳುವುದರತ್ತ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಕರೆ ನೀಡಿದರು.

      ಕೆ.ಎನ್.ರಾಜಣ್ಣ ಅವರ ಜೊತೆ ಬಿ.ಜಿ.ವೆಂಕಟೇಗೌಡ ಮುಂತಾದವರು ಲಸಿಕ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಸುರೇಶ್‍ಬಾಬು, ಸ್ಥಾನಿಕ ವೈದ್ಯರಾದ ಡಾ. ವೀಣಾ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link