ಕೊರಟಗೆರೆ :
ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣನಿಧಿಯಲ್ಲಿ ಸುಮಾರು 6 ಸಾವಿರ ಕೋಟಿಗಳಷ್ಟು ಹಣ ಇದ್ದು, ಅದನ್ನು ಸರ್ಕಾರವು ಕಾರ್ಮಿಕರ ಕ್ಷೇಮಕ್ಕೆ ಬಳಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ ಪರಮೇಶ್ವರ್ ತಿಳಿಸಿದರು.
ಅವರು ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಟ್ಟಡ ಕಾರ್ಮಿಕರುಗಳಿಗೆ ಸರ್ಕಾರದ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಸರ್ಕಾರದ ಹಲವಾರು ಯೋಜನೆಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದ ಕಾರ್ಮಿಕರಿಗೆ ಶೇಕಡ 1 ರಷ್ಟು ಸೆಸ್‍ನ್ನು ಅವರ ಕಲ್ಯಾಣ ನಿಧಿಗೆ ತೆಗೆದುಕೊಳ್ಳಲಾಗುತ್ತದೆ. ಅಂತಹ ಸಂಗ್ರಹಿಸಲ್ಪಟ್ಟ ಹಣವು ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಸುಮಾರು 6 ಸಾವಿರ ಕೋಟಿಗಳಷ್ಟಿದೆ. ಈ ಹಣದಲ್ಲೆ ಸರ್ಕಾರವು ಕೊರೋನಾ ಸಂಕಷ್ಟ ಸ್ಥಿತಿಯಲ್ಲಿ ಆಹಾರ ಕಿಟ್‍ಗಳನ್ನು ವಿತರಿಸುತ್ತಿದೆ. ಆದರೆ ಈ ಹಣವು ಸಂಪೂರ್ಣವಾಗಿ ಕಟ್ಟಡ ಕಾರ್ಮಿಕರ ಅಭಿವೃದ್ದಿಗೆ ಮತ್ತು ಕಷ್ಟಗಳಿಗೆ ಬಳಸಬೇಕಾದ ಹಣವಾಗಿದೆ. ಇದನ್ನು ಇತರೆ ಯೋಜನೆಗಳಿಗೆ ಉಪಯೋಗಿಸತಕ್ಕದ್ದಲ್ಲ. ಕೆಲವು ತಾಲ್ಲೂಕುಗಳಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವಾಗ ಗೊಂದಲಗಳು ಆಗಿದ್ದು, ತಾಲ್ಲೂಕಿನಲ್ಲಿ ಹೋಬಳಿ ಮಟ್ಟದಲ್ಲು ಸಹ ಕಟ್ಟಡ ಕಾರ್ಮಿಕರಿಗೆ ಈ ಕಿಟ್‍ಗಳನ್ನು ತಲುಪಿಸಿ ಗೊಂದಲವಾಗದಂತೆ ಹಂಚಲು ತಾಕೀತು ಮಾಡಲಾಗಿದೆ ಎಂದರು.
ಡಾ. ಮನಮೋಹನ್‍ಸಿಂಗ್ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ದೇಶದ 43 ವಲಯದ ಎಲ್ಲಾ ವರ್ಗದ ಶ್ರಮ ಜೀವಿಗಳ ಅಸಂಘಟಿತ ಕಾರ್ಮಿಕರನ್ನು ಗುರ್ತಿಸಿ ಅವರಿಗಾಗಿ ಸರ್ಕಾರದ ಯೋಜನೆಗಳನ್ನು ಕಾರ್ಯಗತ ಮಾಡಲಾಯಿತು. ಈ ಹಣದಲ್ಲಿ ಅವರಿಗೆ ಆರೋಗ್ಯ, ಹೆರಿಗೆ ಭತ್ಯೆ, ವೈದ್ಯಕೀಯ ಖರ್ಚು ಸೇರಿದಂತೆ ಇತರ ಸೌಲತ್ತುಗಳನ್ನು ನೀಡಬೇಕಿದೆ. ಕೋವಿಡ್ ಕಡಿಮೆಯಾದ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಕಾರ್ಮಿಕರುಗಳನ್ನು ಒಟ್ಟುಗೂಡಿಸಿ ಅವರಿಗೆ ಬೃಹತ್ ಕಾರ್ಯಾಗಾರ ಯೋಜನೆಯನ್ನು ಮಾಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗೋವಿಂದರಾಜು, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಸುಭಾಷ್, ಶ್ರೀಕಾಂತ, ತುಮುಲ್ ನಿರ್ದೇಶಕ ಈಶ್ವರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಪಪಂ ಸದಸ್ಯರುಗಳಾದ ಕೆ.ಆರ್ ಓಬಳರಾಜು, ಮುಖಂಡರುಗಳಾದ ಹೆಚ್.ಎಂ. ರುದ್ರಪ್ರಸಾದ್, ಗಣೇಶ್, ವೆಂಕಟಪ್ಪ, ಚಿಕ್ಕರಂಗಯ್ಯ, ಮಕ್ತಿಯಾರ್, ಅರವಿಂದ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
