ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗಿದೆ. ನೈಋತ್ಯ ಮುಂಗಾರು ಮಳೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಬೇಸಿಗೆಯಲ್ಲಿ ಬರದ ಛಾಯೆ ಎದುರಿಸಿದ್ದ ಪ್ರಸಿದ್ಧ ಪ್ರವಾಸಿ ತಾಣ ಕೊಡಗಿಗೆ ಮಳೆಗಾಲದಲ್ಲಿ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಕೊಡಗು ಜಿಲ್ಲೆಯಲ್ಲಿ ಇದೀಗ ಪೂರ್ವ ಮುಂಗಾರು ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಕಾಲರ, ಶೀತ-ಜ್ವರ, ಕೆಮ್ಮು, ವಾಂತಿ, ಬೇದಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳು, ಡಾಬಾ, ಸ್ವೀಟ್ ಸ್ಟಾಲ್, ಬೇಕರಿ, ಚಾಟ್ಸ್, ಮೆಸ್, ಕ್ಯಾಂಟೀನ್, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪ, ಪೇಯಿಂಗ್‍ಗೆಸ್ಟ್, ಹೋಮ್-ಸ್ಟೇ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ, ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯ ಮತ್ತು ಎಲ್ಲಾ ಆಹಾರ ತಯಾರಿಕಾದಾರರು ಸಾರ್ವಜನಿಕರ/ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಕಡ್ಡಾಯವಾಗಿ ಗ್ರಾಹಕರಿಗೆ ಕುದಿಸಿದ ಶುದ್ಧವಾದ ನೀರು ನೀಡುವಂತೆ ಸೂಚಲಾಗಿದೆ.
ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವಂತೆ, ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಮತ್ತು ತಯಾರಿಸಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಸೂಕ್ತ ರಿತಿಯಲ್ಲಿ ಮುಚ್ಚಿಟ್ಟು ಸ್ವಚ್ಚವಾದ ವಿಧಾನದ ಮೂಲಕ ತಯಾರಿಕೆ ಮತ್ತು ವಿತರಣೆ ಮಾಡುವಂತೆ ತಿಳಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪರಿವೀಕ್ಷಣೆ ಸಂದರ್ಭದಲ್ಲಿ ಕೆಲವು ಕಲ್ಯಾಣ ಮಂಟಪಗಳ ಕುಡಿಯುವ ನೀರಿನ ಆಹಾರ ಮಾದರಿಗಳನ್ನು ಕಾಯ್ದೆಯಡಿ ನೋಂದಾಯಿತವಾಗಿರುವ ಪ್ರಯೋಗಾಲಯಗಳಿಗೆ ಸೂಕ್ಷ್ಮಾಣು ವಿಶ್ಲೇಷಣೆ ಕಳುಹಿಸಲಾಗಿದೆ. ಕೆಲವು ಕಲ್ಯಾಣ ಮಂಟಪಗಳ ನೀರು ಕುಡಿಯಲು ಯೋಗ್ಯವಿಲ್ಲವೆಂಬುದಾಗಿ ವರದಿ ಸ್ವೀಕೃತವಾಗಿದೆ ಎಂದು ಹೇಳಿದೆ.
ಆದ್ದರಿಂದ ಎಲ್ಲಾ ಆಹಾರ ತಯಾರಿಕಾದಾರರು, ಆಹಾರ ತಯಾರಿಕೆಯ ಎಲ್ಲಾ ಹಂತಗಳಲ್ಲಿ ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರ ತಯಾರಿಕೆಗೆ ಬಳಸುವ ನೀರನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ನೋಂದಾಯಿತವಾಗಿರುವ ಪ್ರಯೋಗಾಲಯಗಳಿಗೆ ಪ್ರತಿ ಆರು ತಿಂಗಳಿಗೆ ಒಮ್ಮೆ ಖುದ್ದು ವಿಶ್ಲೇಷಣೆಗಾಗಿ ಕಳುಹಿಸಲು ಸೂಚನೆ ನೀಡಲಾಗಿದೆ.
ಹಾಗೆಯೇ ಎಲ್ಲಾ ವರ್ಗದವರು ಕಡ್ಡಾಯವಾಗಿ ಆಹಾರ ನೋಂದಣಿ/ ಪರವಾನಗಿಯನ್ನು ಪಡೆಯುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟೀಸ್ ಮತ್ತು ದಂಡ ವಿಧಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ. ಇ. ಅನಿಲ್ ಧಾವನ್ ಎಚ್ಚರಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿಯೂ ಈ ಬಾರಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆಯಲ್ಲಿ ಬೇಸಿಗೆಯಲ್ಲಿ ನೀರಿನ ಮಟ್ಟ ಕುಸಿದು, ಬತ್ತಿ ಹೋಗಿತ್ತು. ಕುಂಡಾಮೇಸ್ತ್ರಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ.
ಈಗ ನೀರಿನ ಬವಣೆ ಇರುವುದರಿಂದ ಮುಂದೆ ಮಳೆ ಬಂದು ನೀರಿನ ಹರಿವು ಹೆಚ್ಚಾಗಿ ನೀರು ಶೇಖರಣೆ ಆಗುವವರೆಗೆ ಎಲ್ಲಾ ಮಡಿಕೇರಿ ನಗರಸಭೆಯ 23 ವಾರ್ಡ್‍ಗಳಿಗೆ ಏಕಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡುವುದು ಕಷ್ಟ. ಆದ್ದರಿಂದ ದಿನ ಬಿಟ್ಟು ದಿನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು.
ಅಲ್ಲದೇ ನೀರನ್ನು ಮಿತವಾಗಿ ಬಳಸಿ. ಅನುಪಯುಕ್ತವಾಗಿ ಬಳಸದೆ (ಕಾರು, ಸ್ಕೂಟರ್ ಇತ್ಯಾದಿ ವಾಹನಗಳನ್ನು ಕುಡಿಯುವ ನೀರಿನಿಂದ ಶುಚಿಗೊಳಿಸದೇ ಅಲ್ಲದೆ ಮನೆಯ ಹೂ ತೋಟ ಮತ್ತು ಹೂ ಕುಂಡಗಳಿಗೆ ಉಪಯೋಗಿಸದೇ) ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆಯೂ ಮನವಿ ಮಾಡಲಾಗಿತ್ತು.
ಒಂದು ವೇಳೆ ಕುಡಿಯುವ ನೀರನ್ನು ಅನುಪಯುಕ್ತವಾಗಿ ಬಳಕೆ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ