ಕೊಡಗು
ಬಿಸಿಲಿಗೆ ತತ್ತರಿಸಿದ ಕೊಡುಗು-ಮಡಿಕೇರಿ ವ್ಯಾಪ್ತಿಯಲ್ಲಿ ಮಳೆಯ ಸಿಂಚನವಾಗಿದೆ. ವಾರಾಂತ್ಯ ಶುಕ್ರವಾರ ಕೊಡಗು ಜನರಿಗೆ ಮಳೆರಾಯನ ದರ್ಶನವಾಗಿದೆ. ಮಧ್ಯಾಹ್ನ ವಿವಿಧೆಡೆ ಜೋರು ಮಳೆ ದಾಖಲಾಗಿದೆ.
ಬಿರು ಬೇಸಿಗೆಯ ಬಿಸಿಲಲ್ಲಿ ಬೇಯುತ್ತಿರುವ ಕರ್ನಾಟಕ ಜನರು ಮಳೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಮಳೆರಾಯ ಆಯ್ದ ಜಿಲ್ಲೆಗಳಿಗೆ ಮಾತ್ರ ಮಳೆ ಸುರಿಸುವ ಮೂಲಕ ತನ್ನ ಆಟ ಮುಂದುವರೆಸಿದ್ದಾನೆ. ಇಂದು ಕೊಡಗು ಹಾಗೂ ಮಡಿಕೇರಿ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಉತ್ತಮ ಮಳೆ ಆಗಿದೆ. ಇಡೀ ದಿನ ಮೋಡ ಕವಿದ ವಾತಾವರಣ ಕಂಡು ಬಂದಿದೆ.
ಕೊಡಗಿನಲ್ಲಿ ಮಳೆ ಆಗಿದ್ದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ. ಕೊಡಗಿನ ನಿಲ್ಜಿ, ಮಡಿಕೇರಿ, ಸೋಮವಾರ ಪೇಟೆ ಸುತ್ತಮುತ್ತಲಿನ ಒಂದೆರಡು ಪ್ರದೇಶಗಳಲ್ಲಿ ಕೆಲ ಕಾಲ ಒಂದೇ ಸಮನೆ ಮಳೆ ಆಗಿದೆ. ಎಷ್ಟು ಪ್ರಮಾಣದಲ್ಲಿ ಮಳೆ ಆಗಿದೆ ಎಂಬುದರ ಮಾಹಿತಿ ಲಭ್ಯವಾಗಬೇಕಿದೆ.
ಕರ್ನಾಟಕ ವೆದರ್ ಹೆಸರಿನ ಟ್ವೀಟ್ (X) ನಲ್ಲಿ ಕೊಡಗಿನ ಮಳೆ ವಿಡಿಯೋ ಪೋಸ್ಟ್ ಮಾಡಲಾಗಿದೆ. ಮಧ್ಯಾಹ್ನ ಹೊತ್ತಿನಲ್ಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆಗಾಲ ಎಂಬಂತೆ ಭಾಸವಾಗುತ್ತದೆ. ಏಕಾಎಕಿ ಬಂದ ಮಳೆ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ತಂಪೆರೆದಿದೆ.
ಈ ವರ್ಷದ ಮೊದಲ ಮಳೆ ಎರಡು ವಾರದ ಹಿಂದೆ ಕೊಡಗಿನಲ್ಲಿಯೇ ಆಗಿತ್ತು. ಅದಾದ ಬಳಿಕ ಆಗಾಗ ಕೊಡಗು, ಬೀದರ್, ಕಲಬುರಗಿ, ಹುಬ್ಬಳ್ಳಿ ಸೇರಿದಂತೆ ಕೆಲವಡೆ ಮಳೆಯ ದರ್ಶನವಾಗಿದೆ. ಇದಕ್ಕೆ ವಿರುದ್ಧವೆಂಬಂತೆ ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕರ್ನಾಟಕ ಜಿಲ್ಲೆಗಳಾದ ಹಾವೇರಿ, ಗದಗ, ಕೊಪ್ಪಳ, ಕಲಬುರಗಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ ಇನ್ನಿತರ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳು ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ಗರಿಷ್ಠ ತಾಪಮಾನದಲ್ಲಿ ಸುಮಾರು 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಆಗಲಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಕೊಪ್ಪಳ, ರಾಯಚೂರು, ವಿಜಯಪುರ, ಗದಗ ಜಿಲ್ಲೆಗಳಲ್ಲಿ ತಲಾ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ರೀತಿ ಇನ್ನೂ ಕೆಲವು ದಿನ ಹೆಚ್ಚು ತಾಪಮಾನದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮಳೆಯ ಸುಳಿವೆ ಇಲ್ಲದಾಗಿದೆ. ಇಲ್ಲಿ ಸಹ ಗರಿಷ್ಠ ತಾಪಮಾನದಲ್ಲಿ 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತಿದೆ. ನಿತ್ಯ ಎಂದಿಗಿಂತಲೂ ಹೆಚ್ಚು ಬಿಸಿಲು ಕಂಡು ಬರುತ್ತಿದೆ. ಬಿಸಿಲ ಝಳಕ್ಕೆ ಬೆಂಗಳೂರು ಜನರು ತತ್ತರಿಸಿದ್ದಾರೆ. ಸದ್ಯ ರಾಜಧಾನಿಗೆ ಮಳೆ ಬರುವ ಮುನ್ಸೂಚನೆ ಇಲ್ಲದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ