ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿನೂತನ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ವೇಳೆ ಟೀಂ ಇಂಡಿಯಾ, ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭಾವುಕರಾದ ಪ್ರಸಂಗವೊಂದು ನಡೆಯಿತು.
ವಿರಾಟ್ ಕೊಹ್ಲಿ, ತಾವು ಆರ್ಸಿಬಿ ತಂಡಕ್ಕೆ ಮೊದಲ ಬಾರಿ ಸೆಲೆಕ್ಟ್ ಆದಾಗ ತಮಗೆ ನೀಡಲಾದ ಮೊತ್ತ ಕೇಳಿ ಶಾಕ್ ಆಗಿದ್ದರಂತೆ. ಈ ಕುರಿತು ಖ್ಯಾತ ನಿರೂಪಕ ಡಾನಿಶ್ ಸೇಠ್ ಜೊತೆಗಿನ ಆರ್ಸಿಬಿಯ ಪಾಡ್ಕಾಸ್ಟ್ ಸಂದರ್ಶನ ವೇಳೆ ಕೊಹ್ಲಿ ಮಾತನಾಡಿದ್ದಾರೆ.
‘ಐಪಿಎಲ್ ಹರಾಜು ನಡೆಯುತ್ತಿದ್ದಾಗ ನಾನು ಮಲೇಷಿಯಾದಲ್ಲಿ ಅಂಡರ್-19 ವಿಶ್ವಕಪ್ ತಂಡವನ್ನು ಮುನ್ನಡೆಸುತ್ತಿದ್ದೆ. ಹರಾಜಿನಲ್ಲಿ ಆರ್ಸಿಬಿ ನನಗೆ ನೀಡಿದ ಮೊತ್ತ ಕೇಳಿ ನನಗೇ ನಂಬಲಾಗಲಿಲ್ಲ. ದೆಹಲಿ ಫ್ರಾಂಚೈಸಿ ನನ್ನನ್ನು ಖರೀದಿಸಲು ಆಸಕ್ತಿ ತೋರಿತ್ತು ಎಂದು ನಾನು ಕೇಳ್ಪಟ್ಟಿದ್ದೆ.
ಆದರೆ ಆಗ ನಮ್ಮ ತಂಡದಲ್ಲಿದ್ದ ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಹಿನ್ನೆಲೆ ಡೆಲ್ಲಿ ಫ್ರಾಂಚೈಸಿ ತಮ್ಮ ಬೌಲಿಂಗ್ ಡಿಪಾರ್ಟ್ಮೆಂಟ್ನ ಬಲಿಷ್ಠಗೊಳಿಸಲು ಸಾಂಗ್ವಾನ್ರನ್ನ ಖರೀದಿಸಿತ್ತು’ ಎಂದು ಕೊಹ್ಲಿ ಹೇಳಿದ್ದಾರೆ.
ಐಪಿಎಲ್ ಮೊದಲ ಎಡಿಷನ್ನಿಂದಲೂ ವಿರಾಟ್ ಕೊಹ್ಲಿ, ಆರ್ಸಿಬಿ ಬಿಟ್ಟು ಬೇರೆ ತಂಡದ ಪರ ಆಡಿಲ್ಲ. 9 ವರ್ಷಗಳ ಕಾಲ ಆರ್ಸಿಬಿ ತಂಡವನ್ನ ಮುನ್ನಡೆಸಿರೋ ಕೊಹ್ಲಿ, ಕಳೆದ ವರ್ಷ ಆರ್ಸಿಬಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ