ಕೊರಟಗೆರೆ :
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಮೀಮ್ ಉನ್ನಿಸಾ ಪರಿಶಿಷ್ಟ ಪಂಗಡಗಳ ಜನಾಂಗದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಸರ್ಕಾರದಿಂದ ಮಂಜೂರಾಗಿರುವ ವಾಲ್ಮೀಕಿ ಭವನವನ್ನು ಹಲವು ವರ್ಷಗಳಿಂದ ನಿರ್ಮಿಸದೆ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಆರೋಪಿಸಿ, ಇದರ ವಿರುದ್ದ ತಾಲ್ಲೂಕು ವಾಲ್ಮೀಕಿ ಸಮಾಜವು ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದೆ ಎಂದು ಪ.ಪಂ ಸದಸ್ಯ ಹಾಗೂ ಸಮುದಾಯದ ಮುಖಂಡ ಕೆ.ಆರ್. ಓಬಳರಾಜು ತಿಳಿಸಿದರು.
ಅವರು ಮಂಗಳವಾರ ತಾಲ್ಲೂಕು ಕಛೇರಿಯಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ಮಾತನಾಡಿದರು. ಕೊರಟಗೆರೆ ಪಟ್ಟಣಕ್ಕೆ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಸುಮಾರು 1.25 ಕೋಟಿ ರೂ. ಮಂಜೂರಾಗಿ, ಭೂಮಿ ಗುರುತಿಸಿ ಹಲವು ವರ್ಷಗಳಾಗಿವೆ. ಈ ಬಗ್ಗೆ ಶಾಸಕರು ಹಲವು ಭಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಆದರೂ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಈ ಬಗ್ಗೆ ಶ್ರಮ ವಹಿಸದೆ, ಇಲಾಖೆ ಕೆಲಸಗಳನ್ನು ಸರಿಯಾಗಿ ನಿರ್ವಹಿಸದೆ ಕಾಲ ತಳ್ಳುತ್ತಿದ್ದು, ಅಧಿಕಾರ ಲೋಪವೆಸಗಿದ್ದಾರೆ. ಕಳೆದ ವರ್ಷ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನು ಇದೇ ಕಾರಣದಿಂದಲೆ ಬಹಿಷ್ಕರಿಸಲಾಗಿತ್ತು. ಆಗಲೂ ಸಹ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.
ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪ.ಜಾತಿ ಮತ್ತು ಪಂಗಡದ ಕುಂದು-ಕೊರತೆ ಸಭೆಯಲ್ಲು ಸಹ ಸಮಾಜ ಕಲ್ಯಾಣಾಧಿಕಾರಿಗಳು ವಾಲ್ಮೀಕಿ ಭವನವನ್ನು ಕೆಲವೆ ದಿನಗಳಲ್ಲಿ ಪ್ರಾರಂಭಿಸುವ ಆಶ್ವಾಸನೆ ನೀಡಿದ್ದರು. ಆದರೆ ಅಧಿಕಾರಿಗಳ ವರ್ತನೆ ನೋಡಿದರೆ ಸಮಾಜದ ಬಗ್ಗೆ ಅವರಿಗಿರುವ ನಿರ್ಲಕ್ಷ್ಯ ಭಾವನೆ ತೋರಿಸುತ್ತದೆ. ಇದು ಹೀಗೆಯೆ ಮುಂದುವರಿದರೆ ಸಮಾಜದ ಮುಖಂಡರೆಲ್ಲರೂ ಧರಣಿ ಸತ್ಯಾಗ್ರಹವನ್ನು ನಡೆಸಬೇಕಾಗುವುದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಮುದಾಯದ ಮತ್ತೊಬ್ಬ ಮುಖಂಡ ವಿಜಯಕುಮಾರ್ ಮಾತನಾಡಿ, ತಾಲ್ಲೂಕಿಗೆ ತಲಾ 50 ಲಕ್ಷ ರೂ. ಗಳಲ್ಲಿ 4 ವಾಲ್ಮೀಕಿ ಭವನಗಳು ಹೋಬಳಿ ಮಟ್ಟದಲ್ಲಿ ಮತ್ತು 9 ವಾಲ್ಮೀಕಿ ಭವನಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಜೂರಾಗಿ ಹಲವು ವರ್ಷಗಳಾಗಿವೆ. ಸಮಾಜದ ಮುಖಂಡರುಗಳು ಮತ್ತು ಜನಪ್ರತಿನಿಧಿಗಳು ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಿ ಅಧಿಕಾರಿಗಳ ಗಮನಕ್ಕೆ ತಂದರೂ, ಸಮಾಜ ಕಲ್ಯಾಣಾಧಿಕಾರಿಗಳು ಈ ಬಗ್ಗೆ ದಾಖಲೆಗಳನ್ನು ಇಲಾಖೆಗೆ ಒದಗಿಸದೆ ಕಾಮಗಾರಿಗಳು ನನೆಗುದ್ದಿಗೆ ಬಿದ್ದಿವೆ. ಸರ್ಕಾರವು ತುಳಿತಕ್ಕೆ ಒಳಗಾದ ವರ್ಗಗಳಿಗೆ ನೀಡುತ್ತಿರುವ ಸೌಲಭ್ಯ ಮತ್ತು ಸೌಲತ್ತುಗಳನ್ನು ಆ ವರ್ಗಗಳಿಗೆ ತಲುಪಿಸುವಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಗಮನ ವಹಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಅಲ್ಲಿಯವರೆಗೂ ಸರ್ಕಾರ ಮಾಡುವ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸದೆ ನಮ್ಮ ಮಟ್ಟದಲ್ಲಿ ಜಯಂತಿಯನ್ನು ಮಾಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರುಗಳಾದ ಪುಟ್ಟನರಸಯ್ಯ, ಲಕ್ಷ್ಮೀನಾರಾಯಣ್, ನಟರಾಜು, ಮಾಜಿ ಉಪಾಧ್ಯಕ್ಷ ಕೆ.ವಿ ಮಂಜುನಾಥ್, ಮುಖಂಡರುಗಳಾದ ರಮೇಶ್, ಚಿಕ್ಕರಂಗಯ್ಯ, ಕಾರ್‍ಮಹೇಶ್, ಲಕ್ಷ್ಮೀಶ ಕೆ.ಎಲ್, ಗೋಪಿನಾಥ್, ನಂಜಪ್ಪ, ಹೆಚ್.ರಮೇಶ್, ನಾಗರಾಜು, ಕೇಶವಮೂರ್ತಿ, ಮಂಜುನಾಥ್, ಕೆಂಪರಾಜು, ರಂಗನಾಥ್, ಶ್ರೀನಿವಾಸ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ