ಅಕ್ಕಿರಾಂಪುರದಲ್ಲಿ ಟೆಂಪೋ ಪಲ್ಟಿ : 20 ಮೇಕೆ – ಕುರಿ ಸಾವು!!

ಕೊರಟಗೆರೆ :

      ರಾಜ್ಯದ ಪ್ರಮುಖ ಕುರಿ-ಮೇಕೆ ಮಾರುಕಟ್ಟೆಯಾದ ಅಕ್ಕಿ ರಾಂಪುರದಲ್ಲಿ ಕುರಿ ಟೆಂಪೋ ಪಲ್ಟಿ ಹೊಡೆದು 13 ಮೇಕೆ 7 ಕುರಿ ಸಾವಿಗೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೆ ದೊಡ್ಡ ಅವಘಡ ತಪ್ಪಿದಂತಾಗಿದೆ.

      ತಾಲ್ಲೂಕಿನ ಅಕ್ಕಿರಾಂಪುರ ಕುರಿ-ಮೇಕೆ ಸಂತೆ ರಾಜ್ಯದಲ್ಲಿ ಪ್ರಸಿದ್ಧವಾದ ವಹಿವಾಟಿನ ಪ್ರಮುಖ ಸ್ಥಾನವಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯ ಆಂಧ್ರ- ತಮಿಳುನಾಡುಗಳಿಂದಲೂ ಇಲ್ಲಿಗೆ ಬಂದು ವಹಿವಾಟು ನಡೆಸುವುದು ಸಾಮಾನ್ಯವಾಗಿದೆ. ಶನಿವಾರ ಕೊಂಡ ಕುರಿ-ಮೇಕೆಗಳನ್ನು ತುಂಬಿಕೊಂಡು ಮಾರ್ಕೆಟ್‍ನಿಂದ ಸ್ವಲ್ಪ ಮುಂದೆ ಸಾಗಿದ ತಕ್ಷಣ ಸಾರ್ವಜನಿಕ ಕಿರು ನೀರು ಸರಬರಾಜು ಪೈಪ್‍ಲೈನ್ ಗುಂಡಿಗೆ ಟೆಂಪೋ ಚಕ್ರ ಇಳಿದು ಮಗುಚಿ ಬಿದ್ದ ಪರಿಣಾಮ ಟೆಂಪೋದಲ್ಲಿದ್ದ ಒಟ್ಟು 20 ಕುರಿ-ಮೇಕೆಗಳು ಸಾವಿಗೀಡಾಗಿವೆ. ಅದೃಷ್ಟವಶಾತ್ ಮಾರ್ಕೆಟ್‍ನಲ್ಲಿ ಹೆಚ್ಚು ಜನರಿದ್ದರೂ ಕೂಡ ಯಾವುದೇ ಪ್ರಾಣಾಪಾಯವಾಗಿರುವುದಿಲ್ಲ.

       ರಾಜ್ಯದ ದೊಡ್ಡ ಕುರಿ-ಮೆಕೆ ವ್ಯಾಪಾರ ವಹಿವಾಟು ಕೇಂದ್ರದಲ್ಲೊಂದಾದ ತಾಲ್ಲುಕಿನ ಅಕ್ಕಿರಾಂಪುರ ಮಾರುಕಟ್ಟೆ ತುಮಕೂರಿನ ಎಪಿಎಂಸಿ ಅಧೀನದಲ್ಲಿ ನಡೆಯುತ್ತಿದೆ. ಹಬ್ಬ-ಹರಿದಿನಗಳಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇಲ್ಲಿ ಮೂಲಭೂತ ಸೌಕರ್ಯಗಳೆ ಇಲ್ಲದಿರುವುದು ಇಲ್ಲಿನ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ,

     ಮಾರುಕಟ್ಟೆಯಲ್ಲಿ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಅತ್ಯಾಧುನಿಕವಾಗಿ ವ್ಯವಹರಿಸಲು ಯಾವುದೇ ವ್ಯವಸ್ಥೆ ಇಲ್ಲದಿರುವುದು ಒಂದು ದುರದೃಷ್ಟಕರ ಸಂಗತಿಯಾಗಿದೆ. ಬೇರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ಹಣಕಾಸಿನ ವಹಿವಾಟಿನಲ್ಲಿ ಹೆಚ್ಚು ವ್ಯವಹಾರ ಹೊಂದಿದ್ದರೂ ರೈತರಿಗೆ ಹಾಗೂ ಬಡವರಿಗೆ ಆಧುನಿಕ ರೀತಿಯಲ್ಲಿ ವ್ಯವಹಾರ ದಕ್ಕದೆ ತೂಕಕ್ಕೆ ತಕ್ಕಂತೆ ಬೆಲೆ ಸಿಗದೆ ಎಲ್ಲಾ ರೀತಿಯಲ್ಲೂ ಬೇಕಾಬಿಟ್ಟಿ ವ್ಯವಹಾರ ನಡೆಯುತ್ತಿದೆ. ಆಯುಧ ಪೂಜೆ ಹಬ್ಬದ ಪ್ರಯುಕ್ತ ಕುರಿ-ಮೇಕೆಗಳ ಹೆಚ್ಚು ವ್ಯಾಪಾರ-ವಹಿವಾಟು ನಡೆದಿದ್ದು, ಹೆಚ್ಚು ಜನಸಂದಣಿ ಇದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

     ರಾಜ್ಯದಲ್ಲಿ ಹೆಚ್ಚು ಮೇಕೆ-ಕುರಿ ವ್ಯಾಪಾರ ವಹಿವಾಟು ನಡೆಯುವ ಮಾರುಕಟ್ಟೆಗಳಲ್ಲಿ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಮಾರುಕಟ್ಟೆಯು ಪ್ರಮುಖವಾಗಿದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಪಾರ್ಕಿಂಗ್ ವ್ಯವಸ್ಥೆಯಾಗಲಿ, ಅತ್ಯಾಧುನಿಕ ರೀತಿಯಲ್ಲಿ ವ್ಯವಹರಿಸುವಂತ ಯಾವುದೇ ಸೌಕರ್ಯವಿಲ್ಲ. ಇಷ್ಟು ದೊಡ್ಡ ಮಟ್ಟದ ವಹಿವಾಟು ಕೇಂದ್ರದಲ್ಲಿ ಜನರನ್ನು ತಹಬಂದಿಗೆ ತರುವ ಪೊಲೀಸ್ ವ್ಯವಸ್ಥೆ ಸೇರಿದಂತೆ ರೈತರಿಗೆ ಅನುಕೂಲಕರವಾಗುವಂತಹ ಯಾವುದೇ ಸೌಕರ್ಯ ಇಲ್ಲಿ ಇಲ್ಲವಾಗಿದೆ. ಶನಿವಾರ ನಡೆದಂತಹ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗದದಿರುವುದು ಪವಾಡ ಸದೃಶವಾಗಿದೆ. ಈ ಘಟನೆಗೆ ಅವೈಜ್ಞಾನಿಕ ಟ್ರಂಚ್‍ಗಳು ಕಾರಣವಾಗಿವೆ.

-ಮಧುಸೂದನ್, ಗ್ರಾ.ಪಂ ಸದಸ್ಯ, ಅಕ್ಕಿರಾಂಪುರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link