ಕೊರಟಗೆರೆ ಕೆರೆ ಒತ್ತುವರಿ : ಕೆಂಡಾಮಂಡಲರಾದ ಪರಂ!!

ಕೊರಟಗೆರೆ :

ಪಟ್ಟಣ ಸಮೀಪದ ಜಂಪೇನಹಳ್ಳಿ ಕೆರೆಯು ತುಂಬಿದ್ದು, ಸೋಮವಾರ ಬೆಳಗ್ಗೆ ಗಂಗಾ ಪೂಜೆಗೆ ಬಂದ ಶಾಸಕ ಡಾ.ಜಿ ಪರಮೇಶ್ವರ ಕೆರೆಯ ಒತ್ತುವರಿಯನ್ನು ಕಂಡು ಕೆಂಡಾಮಂಡಲವಾದರು. ಬಹುತೇಕವಾಗಿ ಡಾಬ ಮತ್ತು ಮಾಂಸಾಹಾರಿ ಹೋಟೆಲ್‍ಗಳು ಕಾಲುಭಾಗದಷ್ಟು ಕೆರೆಯನ್ನು ಒತ್ತುವರಿ ಮಾಡಿದ್ದಾರೆ. ತಕ್ಷಣ ತಹಸೀಲ್ದಾರ್ ಹಾಗೂ ಕಿರು ನೀರಾವರಿ ಎಂಜಿನಿಯರ್‍ಗೆ ಒತ್ತುವರಿಯ ಬಗ್ಗೆ ಸರಿಯಾದ ಅಳತೆ ಮಾಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಒತ್ತುವರಿಯಲ್ಲಿ ಅರಣ್ಯ ಇಲಾಖೆಯ ತಂಗುದಾಣವನ್ನೇ ಮಣ್ಣಿನಿಂದ ಮುಚ್ಚಿ ಹಾಕಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಈ ಒತ್ತುವರಿಯಲ್ಲಿ ಕೆಲವು ದಾಖಲಾತಿಗಳೆ ಕಾಣೆಯಾಗುವಲ್ಲಿ ಕಾಣದ ಕೈಗಳು ಸಾಕಷ್ಟಿದ್ದು, ಅದನ್ನು ಪತ್ತೆ ಮಾಡುವಂತೆ ತಹಸೀಲ್ದಾರ್‍ಗೆ ಸೂಚಿಸಿದರು.

    ಅವರು ಜಂಪೇನಹಳ್ಳಿ ಕೆರೆ ಮಳೆಯಿಂದ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಪ.ಪಂಯಿಂದ ಸೋಮವಾರ ಏರ್ಪಡಿಸಲಾಗಿದ್ದ ಗಂಗಾಪೂಜೆ ಮತ್ತು ಬಾಗಿನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

     ಈ ಕೆರೆಯ ಸ.ನಂ ಜಂಪೇನಹಳ್ಳಿ ಗ್ರಾಮಕ್ಕೆ ಸೇರಿದ್ದು, ಇದರ ನೀರನ್ನು ಕೊರಟಗೆರೆ ಪಟ್ಟಣದವರು ಉಪಯೋಗಿಸುತ್ತಿದ್ದಾರೆ. ಇದರ ಜವಾಬ್ದಾರಿ ಗ್ರಾಮ ಪಂಚಾಯತಿ ಮತ್ತು ಪ.ಪಂ ರವರದ್ದಾಗಿದೆ. ಕೂಡಲೇ ಇದನ್ನು ಅಳತೆ ಮಾಡುವಂತೆ ಆದೇಶಿಸಿದರು. ಕಂದಾಯ ಇಲಾಖೆ ಮತ್ತು ಜೆಟ್ಟಿ ಅಗ್ರಹಾರ ಗ್ರಾಪಂಯ ನಿರ್ಲಕ್ಷ್ಯದಿಂದಾಗಿ ಕಳೆದ 15ವರ್ಷಗಳಿಂದ ಕೆರೆಯ ಅರ್ಧಭಾಗ ಒತ್ತುವರಿಗೆ ಬಲಿಯಾಗಿದೆ. ಕೆರೆ ಅಂಗಳದಲ್ಲಿ ಅನಧಿಕೃತವಾಗಿ ಕಟ್ಟಡಗಳು ನಿರ್ಮಾಣ ಆಗಿವೆ. ತಕ್ಷಣ ಜಂಪೇನಹಳ್ಳಿ ಕೆರೆಯ ಸರ್ವೇ ನಡೆಸಿ ಸರಕಾರದ ದಾಖಲೆಯಂತೆ ಕೆರೆಯ ಜಾಗವನ್ನು ಉಳಿಸುವಂತಹ ಪ್ರಯತ್ನವನ್ನು ತಹಸೀಲ್ದಾರ್ ಮಾಡಬೇಕಿದೆ ಎಂದು ಆದೇಶಿಸಿದರು. ಜಂಪೇನಹಳ್ಳಿ ಕೆರೆ ಅಂಗಳದಲ್ಲಿ ನಿರ್ಮಾಣವಾಗಿದ್ದ ಅರಣ್ಯ ಇಲಾಖೆಯ ವೀಕ್ಷಣಾ ಮಂದಿರ ನಾಶವಾಗಿದೆ. ಅನುಮತಿ ಪಡೆಯದೇ ಎತ್ತಿನಹೊಳೆ ಅಧಿಕಾರಿ ವರ್ಗ ಕೋಡಿಯನ್ನು ಹೊಡೆಯುವ ಕೆಲಸ ಮಾಡಿದ್ದಾರೆ. ಕೆರೆಯ ಏರಿ ಮತ್ತು ಕೋಡಿಯ ಮೇಲೆ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಿ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಕಾಪಾಡಬೇಕಿದೆ ಎಂದು ಸೂಚಿಸಿದರು.

ಈ ಬಾರಿ ಮುಂಗಾರು ಸಮರ್ಪಕವಾಗಿ ಬೀಳದ ಹಿನ್ನೆಲೆಯಲ್ಲಿ, ಕೃಷಿ ಕಾರ್ಮಿಕರು ಸರಿಯಾಗಿ ದೊರೆಯದೆ ಬಯಲು ಸೀಮೆಯ ಕೃಷಿ ಅವಲಂಬಿತ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವು ಕಡೆ ಅತಿ ಮಳೆಯಿಂದ ಬೆಳೆಗಳು ಹಾಳಾಗಿವೆ. ಮಳೆಯು ಕಾಲಕ್ಕೆ ಸರಿಯಾಗಿ ಬಾರದ ಹಿನ್ನೆಲೆ ಸರ್ಕಾರವು ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು. ಇನ್ನೊಂದೆಡೆ ಹೆಚ್ಚಿನ ಮಳೆಯಾಗಿ ಕೆರೆ-ಕುಂಟೆಗಳು ತುಂಬಿದ್ದು, ಮುಂದಿನ ದಿನಗಳಲ್ಲಿ ಹೆಚ್ಚ್ಚಿನ ಮಳೆ ಬರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ತಪ್ಪಲಿರುವುದು ಸಂತೋಷದ ವಿಷಯ. ಜಂಪೇನಹಳ್ಳಿ ಕೆರೆಗೆ ಸತತ ಹಲವು ವರ್ಷಗಳಿಂದ ಬಾಗಿನ ಅರ್ಪಿಸುತ್ತಿರುವುದು ಸಂತೋಷವಾಗಿದೆ. ರಾಜ್ಯದ ಆಯ್ದ ಪ್ರದೇಶದಲ್ಲಿ ಮಾತ್ರ ಅರ್ಧ ಭಾಗ ಹೆಚ್ಚು ಮಳೆಯಾಗಿ, ಜನರಿಗೆ ಸಮಸ್ಯೆ ಆಗಿದೆ. ಇನ್ನುಳಿದ ಕಡೆಯಲ್ಲಿ ಮಳೆಯಾಗದೆ ಕೃಷಿ ಬೆಳೆಗಳು ನಾಶವಾಗಿವೆ. ಕೊರಟಗೆರೆ ಕ್ಷೇತ್ರವನ್ನು ಬಡಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಬೆಳೆವಿಮೆ ಬಿಡುಗಡೆಯ ಜೊತೆ ರೈತರಿಗೆ ಸರಕಾರದಿಂದ ಸಹಾಯಹಸ್ತ ನೀಡಬೇಕಿದೆ ಎಂದು ಒತ್ತಾಯ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap