ಕೊರಟಗೆರೆ : ಕೆಳವರ್ಗದವರ ಸೇವೆಯಿಂದ ಬದುಕು ಸಾರ್ಥಕ

ಕೊರಟಗೆರೆ :

      ಮನುಷ್ಯನ ಜೀವನ ಆಧಾರಿತ ಮೌಲ್ಯಗಳ ಮೇಲೆ ನಿರ್ದಿಷ್ಟವಾಗಿದ್ದು, ಸಮಾಜದ ಅಡಿಪಾಯದ ಕೆಳವರ್ಗದ ಬಡವರ ಸೇವೆಗಳಿಗೆ ಆದ್ಯತೆ ನೀಡಿದಲ್ಲಿ ಬದುಕು ಸಾರ್ಥಕ ಎಂದು ಪಾವಗಡ ಶ್ರೀರಾಮಾಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಜಪಾನಂದ ಸ್ವಾಮೀಜಿಗಳು ತಿಳಿಸಿದರು.

      ಅವರು ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ತಾಲ್ಲೂಕಿನ ಪತ್ರಿಕೆ ಹಂಚುವ ಹುಡುಗರಿಗೆ, ಪತ್ರಿಕಾ ವಿತರಕರಿಗೆ ಹಾಗೂ ಪತ್ರಕರ್ತರಿಗೆ ಆಹಾರ ಕಿಟ್ ಹಾಗೂ ಹೊದಿಕೆ ವಿತರಿಸಿ ಮಾತನಾಡಿದರು. ದೇಶದ ಸಂವಿಧಾನದಲ್ಲಿ ಪತ್ರಿಕಾ ಮಾಧ್ಯಮ ನಾಲ್ಕನೆ ಅಂಗವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದು ಉದ್ಯಮವಾಗಿ ಬದಲಾಗುತ್ತಿರುವುದು ದುರದೃಷ್ಟಕರ. ಪತ್ರಿಕಾ ರಂಗದಲ್ಲಿ ಡಿ.ವಿ.ಗುಂಡಪ್ಪ, ವೆಂಕಟಕೃಷ್ಣ ಶರ್ಮ, ಖಾದ್ರಿಶಾಮಣ್ಣ, ಡಿ.ಕೆ.ರೆಡ್ಡಿ, ರಾಮಚಂದ್ರರಾವ್ ಸೇರಿದಂತೆ ಹಲವು ಹಿರಿಯ ಪತ್ರಕರ್ತರ ಮಾರ್ಗದರ್ಶನಗಳು ಪ್ರಸ್ತುತ ಪತ್ರಿಕೋದ್ಯಮ ಜಗತ್ತಿಗೆ ಅವಶ್ಯಕತೆ ಇದೆ. ಪತ್ರಿಕಾ ಮುದ್ರಣ ಮಾಧ್ಯಮದಲ್ಲಿ ಮನೆ-ಮನೆಗೆ ಪತ್ರಿಕೆ ತಲುಪಿಸುವ ಮತ್ತು ಹಂಚುವ ಹುಡುಗರ ಶ್ರಮ ಮತ್ತು ಪಾತ್ರ ಮಹತ್ವದ್ದಾಗಿದೆ. ಅದರ ಏಳಿಗೆಗೆ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದರೂ ಗುರುತಿಸದ ಸ್ಥಿತಿಯಲ್ಲಿ ಇರುತ್ತಾರೆ. ಅಂತಹ ಹುಡುಗರಿಗೆ ಜಿಲ್ಲಾದ್ಯಂತ ಸಹಾಯ ಹಸ್ತ ನೀಡುವ ಕೆಲಸವನ್ನು ಇನ್‍ಫೋಸಿಸ್‍ನ ಮುಖ್ಯಸ್ಥೆ ಸುಧಾಮೂರ್ತಿರವರು ನಮ್ಮಗಳ ಮುಖಾಂತರ ಮಾಡಿಸುತ್ತಿದ್ದಾರೆ. ಈಗಾಗಲೆ ಜಿಲ್ಲಾದ್ಯಂತ ಶಾಲೆಗಳಲ್ಲಿ ಬಿಸಿ ಊಟ ತಯಾರಿಸುವ ಸಿಬ್ಬಂದಿಗೆ ಕಿಟ್‍ಗಳನ್ನು ನೀಡಲಾಗಿದೆ ಎಂದರು.

      ಕೋವಿಡ್-19 ಬಂದಾಗಿನಿಂದ ಹಕ್ಕಿ-ಪಿಕ್ಕಿ ಸೇರಿದಂತೆ ಹೊರ ರಾಜ್ಯದಿಂದ ಬಂದು ಅಂತತ್ರದಲ್ಲಿದ್ದ ಕಾರ್ಮಿಕರುಗಳಿಗೆ 30 ಸಾವಿರ ಕಿಟ್‍ಗಳನ್ನು ವಿತರಿಸಲಾಗಿದೆ. ಪ್ರತಿ ನಿತ್ಯ 1200 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆಟೋ ಚಾಲಕರು, ಕ್ಷೌರಿಕರು ಸೇರಿದಂತೆ 800 ಮಂದಿ ಕಸುಬು ದಾರರಿಗೆ ಪ್ರತಿ ನಿತ್ಯ 200 ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಕೆಲಸ ಮಾಡಲಾಯಿತು.

      ಇದರೊಂದಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ದೂರ ತರಂಗಿಣಿ ಎನ್ನುವ ತಂತ್ರಜ್ಞಾನ ಅಂತರಜಾಲ ಬೋಧನಾ ವಿಧಾನವನ್ನು ಇನ್‍ಫೋಸಿಸ್ ಸಂಸ್ಥೆಯಿಂದ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡುತ್ತಿದ್ದು, ಇದಕ್ಕೂ ಸಹ ಸುಧಾಮೂರ್ತಿರವರೆ ಕಾರಣ ಕರ್ತರಾಗಿದ್ದಾರೆ ಎಂದ ಅವರು ರಾಮಕೃಷ್ಣ ಆಶ್ರಮ ಸಾಮಾಜಿಕ ಸೇವೆಗೆ ಸದಾ ಬದ್ದವಾಗಿದೆ ಎಂದರು.

      ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಜಪಾನಂದ ಸ್ವಾಮೀಜಿರವರ ಸಾಮಾಜಿಕ ಸೇವೆ ಇಡೀ ಭಾರತದಲ್ಲೆ ಪ್ರಸಿದ್ದವಾಗಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅವರ ಸೇವೆ ಅಪಾರವಾಗಿದ್ದು, ಪತ್ರಿಕೆ ಹಂಚುವ ಹುಡುಗರಿಗೆ ರಾಮಕೃಷ್ಣ ಆಶ್ರಮ ಮಾಡುತ್ತಿರುವ ಕೊಡುಗೆ ಉತ್ತಮವಾಗಿದೆ. ಕೊರಟಗೆರೆ ಪತ್ರಕರ್ತರು ಸಹ ಸಮಾಜಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

      ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ, ಕೊರಟಗೆರೆ ಕಾರ್ಯನಿರತ ಪತ್ರಕರ್ತರ ಸಂಘ ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿಯೂ ಸಹ ಪತ್ರಿಕಾ ವೃತ್ತಿಯೊಂದಿಗೆ ಸೇವೆ ಮಾಡಿಕೊಂಡು ಬಂದಿದೆ. ಸಂಘವು ಪತ್ರಕರ್ತರಿಗೆ ಮಾತ್ರ ಸೀಮಿತವಾಗಿರದೆ ಪತ್ರಿಕಾ ವಿತರಕರಿಗೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ರವರಿಂದ ಚಳಿಗಾಲದ ಸಮಯದಲ್ಲಿ ಬೆಚ್ಚಗಿನ ಉಡುಪು ನೀಡುವುದರೊಂದಿಗೆ ಅವರಿಗೆ ಮತ್ತು ಕುಟುಂಬಕ್ಕೆ ಉಚಿತ ಆರೋಗ್ಯ ಕಾರ್ಡ್‍ಗಳನ್ನು ಸಹ ನೀಡಲಾಗಿದೆ. ಕೋವಿಡ್ ಸಮಯದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಆಹಾರ ಕಿಟ್‍ಗಳನ್ನು ಸಹ ವಿತರಿಸಿದ್ದು, ಸಂಘವು ಕೋವಿಡ್ ಸಮಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹ ಭಾಗಿತ್ವದಲ್ಲಿ, ಕಡು ಬಡವರು, ನಿರ್ಗತಿಕರಿಗೆ ಆಹಾರ ವಿತರಣೆ, ಕಿಟ್ ವಿತರಣೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಹಲವು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ಜಪಾನಂದ ಸ್ವಾಮೀಜಿಗಳ ಈ ಸಾಮಾಜಿಕ ಸೇವೆಯು ನಮಗೆಲ್ಲ ಮಾರ್ಗದರ್ಶನವಾಗಿದೆ ಎಂದರು.

      ಕಾರ್ಯಕ್ರಮದಲ್ಲಿ ಆಶ್ರಮದ ಪ್ರಕಾಶ್, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎನ್.ಪದ್ಮನಾಭ್, ಉಪಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಡಿ.ಎಂ.ರಾಘವೇಂದ್ರ, ಕಾರ್ಯದರ್ಶಿ ಜಿ.ಎಲ್.ಸುರೇಶ್, ಗ್ರಾಮೀಣ ಉಪಾಧ್ಯಕ್ಷ ಎನ್.ಮೂರ್ತಿ, ಹರೀಶ್, ಮಂಜುನಾಥ್, ದೇವರಾಜು, ಲಕ್ಷ್ಮೀಶ್, ನರಸಿಂಹಮೂರ್ತಿ ಸೇರಿದಂತೆ ಪತ್ರಕರ್ತರು, ವಿತರಕರು ಹಾಜರಿದ್ದರು.

Recent Articles

spot_img

Related Stories

Share via
Copy link