ಆಗ್ನೇಯ ಪದವೀಧರ ಕ್ಷೇತ್ರ : ಬಿಜೆಪಿ ಅಭ್ಯರ್ಥಿಬೆಂಬಲಿಸಲು ಕರೆ

ಕೊರಟಗೆರೆ :

      ಮುಂದೆ ಬರಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದ್‍ರನ್ನು ಶಿಕ್ಷಕರು ಬೆಂಬಲಿಸಿ, ಅವರನ್ನು ಆಯ್ಕೆ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಶಿಕ್ಷಕರಲ್ಲಿ ಮನವಿ ಮಾಡಿದರು.

      ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ವಿವಿಧ ಶಿಕ್ಷಕರುಗಳ ಸಂಘದ ಪದಾಧಿಕಾರಿಗಳೊಂದಿಗೆ ಮಾತನಾಡಿ, ಕಳೆದ ಸಾಲಿನಲ್ಲಿ ಆಯ್ಕೆಯಾದ ಸದಸ್ಯರುಗಳು ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ. ಕ್ಷೇತ್ರದಲ್ಲಿ ಪ್ರವಾಸ ಮಾಡದೆ ಕೇವಲ ಚುನಾವಣೆಯ ಸಮಯದಲ್ಲಿ ಕಂಡ ಸದಸ್ಯರು ಚುನಾವಣೆಯ ನಂತರ ಕಣ್ಮರೆಯಾಗಿರುವುದು ಪದವೀಧರ ಕ್ಷೇತ್ರದ ಮತದಾರರಲ್ಲಿ ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಉತ್ತಮ ನಾಯಕನ ಆಯ್ಕೆ ಮಾಡುವ ನಿಟ್ಟಿನಲಿ, ಈ ಬಾರಿ ಬಿಜೆಪಿ ಅಭ್ಯರ್ಥಿ ತುಮಕೂರು ಜಿಲ್ಲೆಯವರೆ ಆದ ಚಿದಾನಂದ್ ರವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸ ಬೇಕು.

      ಶಿಕ್ಷಕರುಗಳ ಸಮಸ್ಯೆಗಳಾದ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ವಿದ್ಯಾರ್ಹತೆಯ ಮೇಲೆ ಬಡ್ತಿ ಹೊಂದಿರುವ ಶಿಕ್ಷಕರಿಗೆ ಕಾಲಮಿತಿ ವೇತನ ಮಂಜೂರು ಬಗ್ಗೆ ಆದೇಶ ಹೊರಡಿಸುವುದು. 2008 ರ ಪೂರ್ವದಲ್ಲಿ ಪ್ರಾಥಮಿಕ ಶಾಲೆಗಳಿಗೆ ನೇಮಕಾತಿ ಹೊಂದಿ ನಂತರ ಪ್ರೌಢಶಾಲೆಗಳಿಗೆ ಬಡ್ತಿ ಹೊಂದಿರುವ ಶಿಕ್ಷಕರಿಗೆ ವಿಶೇಷ ಭತ್ಯೆ ಹಿಂಪಡೆಯದಂತೆ ಕ್ರಮ ವಹಿಸುವುದು. ಪ್ರೌಢಶಾಲೆಯಿಂದ ಕಾಲೇಜಿಗೆ ಮತ್ತು ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ, ಖಾಲಿ ಇರುವ ಆಂಗ್ಲಶಿಕ್ಷಕರ ನೇಮಕಾತಿ, ಪ್ರತಿ ತಿಂಗಳು ಸಕಾಲದಲ್ಲಿ ವೇತನ ಬಿಡುಗಡೆಗೆ ಕ್ರಮ, ಸರ್ಕಾರ ಜನವರಿ 2020 ರಿಂದ ಜೂನ್ 2021 ರವರೆಗೆ ತಡೆಹಿಡಿದಿರುವ ನೌಕರರ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಿಸುವುದು ಸೇರಿದಂತೆ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಲಾಕ್‍ಡೌನ್ ಸಂಕಷ್ಟ ಪರಿಸ್ಥಿತಿ ತಿಳಿಗೊಂಡ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು. ದೇಶದಲ್ಲಿ ಕೊರೋನಾ ಸೋಂಕು ಹರಡದಂತೆ ದೇಶದಿಂದ ನಿಮೂರ್ಲನೆ ಮಾಡಲು ಎಲ್ಲಾ ಶಿಕ್ಷಕವೃಂದ ಸರ್ಕಾರದ ಕ್ರಮಗಳನ್ನು ಅನುಸರಿಸಿ ಎಂದರು.

      ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಮ್ಮ ಸಮಸ್ಯೆಗಳ ಮನವಿ ಪತ್ರ ನೀಡಿದರು. ಸಭೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ್, ಉಪನ್ಯಾಸಕ ಶ್ರೀನಿವಾಸರೆಡ್ಡಿ, ನಿವೃತ್ತ ಹಿರಿಯ ಶಿಕ್ಷಕರುಗಳಾದ ಹನುಮಂತರೆಡ್ಡಿ, ಬೊಮ್ಮಣ್ಣ, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಹಾಲಿಂಗೇಶ್, ಎಲ್.ಕಾಮಯ್ಯ, ಚಿಕ್ಕಪ್ಪಯ್ಯ, ಸುರೇಶ್, ಧರ್ಮೇಂದ್ರ, ಗಂಗಾಧರ್, ಮಂಜುನಾಥ್, ನಾಗೇಂದ್ರ, ಯತಿಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link