ಕೊರಟಗೆರೆ : ವಿಧಾನಸೌಧ ಚಲೋಗೆ ಹಳ್ಳಿಗಳಲ್ಲಿ ಜಾಗೃತಿ

 ಕೊರಟಗೆರೆ : 

      ಕೇಂದ್ರ ಮತ್ತು ರಾಜ್ಯ ಸರಕಾರದ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ವಿಧಾನಸೌಧ ಚಲೋ ಕಾರ್ಯಕ್ರಮಕ್ಕಾಗಿ ಕೊರಟಗೆರೆ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲೂ ಬೈಕ್ ಜಾಥಾ ನಡೆಸಿ ರೈತರಲ್ಲಿ ಅರಿವು ಮೂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.

      ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ, ಕೊರಟಗೆರೆ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

      ರೈತರ ಭೂಮಿ, ಬೆಳೆ, ಬೆವರು ಮತ್ತು ಬದುಕನ್ನು ಕಬಳಿಸಲು ಕ್ರಿಮಿನಲ್ ಕಾರ್ಪೊರೇಟ್ ಕಂಪನಿಗಳು ಹಾತೊರೆಯುತ್ತಿವೆ. ಎಪಿಎಂಸಿ ತಿದ್ದುಪಡಿಯಿಂದ ಸರಕಾರದ ನಿಯಂತ್ರಣ ಇಲ್ಲದಂತಾಗಿ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ನಾಶ ಆಗಲಿದೆ. ರೈತಾಪಿ ವರ್ಗ ಜಾಗೃತರಾಗಿ ವಿಧಾನಸೌಧ ಚಲೋ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.

      ಕಾರ್ಯಾಧ್ಯಕ್ಷ ನಯಾಜ್ ಅಹಮ್ಮದ್ ಮಾತನಾಡಿ, ರೈತವಿರೋಧಿ, ಜನವಿರೋಧಿ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಂದಕ್ಕೆ ಪಡೆದು, ಬೆಳೆಗಳಿಗೆ ಬೆಂಬಲ ಬೆಲೆ ರೂಪಿಸುವಂತೆ ಹತ್ತಾರು ಲಕ್ಷ ಜನ ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೆ ಹೋರಾಟ 100 ದಿನ ಪೂರೈಸಿದೆ. 300 ಜನ ರೈತರು ಮೃತಪಟ್ಟರೂ ಕೂಡ ಕೇಂದ್ರ ಸರಕಾರ ಮಾತ್ರ ರೈತರ ಜೊತೆ ಮಾತುಕತೆಗೆ ಮುಂದಾಗಿಲ್ಲ. ಮಾ.22ರ ಸೋಮವಾರ ವಿಧಾನ ಸೌಧ ಚಲೋ ನಡೆಯಲಿದೆ ಎಂದು ಹೇಳಿದರು.

      ರೈತಸಂಘದ ಕೊರಟಗೆರೆ ಅಧ್ಯಕ್ಷ ರಂಗಹನುಮಯ್ಯ, ಕಾರ್ಯಾಧ್ಯಕ್ಷ ಸಿ.ಯತಿರಾಜು, ಕಾರ್ಯದರ್ಶಿ ಶಬ್ಬೀರ್ ಅಹಮ್ಮದ್, ರೈತ ಮುಖಂಡರಾದ ವೆಂಕಟರವಣಪ್ಪ, ದೇವರಾಜು, ನಾಗರಾಜು, ಲತೀಫ್, ಅಕ್ರಂ ಪಾಷಾ, ಚಾಂದ್ ಪಾಷಾ, ಇನಾಯತ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ