ಕೊರಟಗೆರೆ :
ಕೂತೂಹಲ ಮೂಡಿಸಿದ್ದ ಕೊರಟಗೆರೆ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ –ಉಪಾಧ್ಯಕ್ಷರು ಜನತೆಯ ನಿರೀಕ್ಷೆ ಮೀರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಜೆಡಿಎಸ್‍ನ ಮಂಜುಳಾಸತ್ಯನಾರಾಯಣ್ ಮತ್ತು ಉಪಾಧ್ಯಕ್ಷರಾಗಿ ಕೆ.ವಿ. ಭಾರತಿ ಸಿದ್ದಮಲ್ಲಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಜೆಡಿಎಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಪಪಂಯ ಪರಿಶಿಷ್ಟ ಪಂಗಡದ ಮಹಿಳಾ ಮೀಸಲು ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ 8 ನೆ ವಾರ್ಡಿನ ಜೆಡಿಎಸ್ ಪಕ್ಷದ ಸದಸ್ಯೆ ಮಂಜುಳಾ ಸತ್ಯನಾರಾಯಣ್ ಮತ್ತು ಸಾಮಾನ್ಯ ಮಹಿಳಾ ಕ್ಷೇತ್ರದ ಉಪಾಧ್ಯಕ್ಷ ಸ್ಥಾನಕ್ಕೆ 15ನೆ ವಾರ್ಡಿನ ಜೆಡಿಎಸ್ ಪಕ್ಷದ ಕೆ.ವಿ.ಭಾರತಿ ಸಿದ್ದಮಲ್ಲಪ್ಪ ಜೆಡಿಎಸ್ ಪಕ್ಷದಿಂದ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯಿತಿ ಪರಿಮಿತಿಯಲ್ಲಿ ಪ್ರಸ್ತುತ ಒಟ್ಟು 14 ಚುನಾಯಿತ ಸದಸ್ಯರಿದ್ದಾರೆ. ಅದರಲ್ಲಿ 8 ಜೆಡಿಎಸ್, 4 ಕಾಂಗ್ರೆಸ್, 1 ಬಿಜೆಪಿ, 1 ಪಕ್ಷೇತರ ಸೇರಿದಂತೆ ಸಂಸದ ಮತ್ತು ಶಾಸಕರ ಮತವನ್ನು ಒಳಗೊಂಡಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.
ಚುನಾವಣೆಯ ವೇಳೆ ಪಪಂಯ ಜೆಡಿಎಸ್ ಸದಸ್ಯರಾದ ಕಾವ್ಯಶ್ರೀ, ಹುಸ್ತಪಾರಿಯಾ, ಅನಿತಾ, ಮಂಜುಳಾ, ಲಕ್ಷ್ಮೀನಾರಾಯಣ, ಪುಟ್ಟನರಸಯ್ಯ, ಕೆ.ವಿ.ಭಾರತಿ, ಬಿಜೆಪಿಯ ಪ್ರದೀಪ್‍ಕುಮಾರ್ ಮತ್ತು ಪಕ್ಷೇತರ ಸದಸ್ಯ ನಟರಾಜು ಸೇರಿ 9 ಸದಸ್ಯರು ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನುಳಿದಂತೆ ಜೆಡಿಎಸ್‍ನ ಭಾಗ್ಯಮ್ಮ ಮತ್ತು ಕಾಂಗ್ರೆಸ್‍ನ ಓಬಳರಾಜು, ಬಲರಾಮಯ್ಯ, ನಾಗರಾಜು, ಹೇಮಲತಾ ಗೈರು ಹಾಜರಾಗಿದ್ದರು.
ಮಾಜಿ ಶಾಸಕ ಆರ್.ಸುಧಾಕರಲಾಲ್ ಮಾತನಾಡಿ, ಕೊರಟಗೆರೆ ಪಟ್ಟಣದ ಜನತೆಯ ಆಶೀರ್ವಾದ ಮತ್ತು ಬೆಂಬಲದಿಂದ ಪಪಂಯ ಆಡಳಿತ ಜೆಡಿಎಸ್ ಪಕ್ಷಕ್ಕೆ ಲಭಿಸಿದೆ. ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ ಬಿಜೆಪಿಯ ಸದಸ್ಯ ಪ್ರದೀಪ್ ಮತ್ತು ಪಕ್ಷೇತರ ನಟರಾಜ್‍ಗೆ ತುಂಬು ಹೃದಯದ ಧನ್ಯವಾದ. ಪಟ್ಟಣದ ಸಮಗ್ರ ಅಭಿವೃದ್ದಿಗೆ ಪಪಂಯ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ಸದಸ್ಯರ ನೇತೃತ್ವದ ತಂಡ ಹಗಲು ರಾತ್ರಿ ಕೆಲಸ ಮಾಡಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಚುನಾವಣೆ ಅಧಿಕಾರಿಯಾಗಿ ತಹಸೀಲ್ದಾರ್ ಗೋವಿಂದರಾಜು, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಶಿವರಾಮಯ್ಯ, ಮುಖಂಡರಾದ ವೀರಕ್ಯಾತರಾಯ, ಆನಂದ್, ನರಸಿಂಹರಾಜು, ಕಲೀವುಲ್ಲ, ರಮೇಶ್, ಕುದುರೆ ಸತೀಶ್, ಸಿದ್ದಮಲ್ಲಪ್ಪ, ಪ್ರಹ್ಲಾದ, ಸೈಯದ್‍ಸೈಫುಲ್ಲ, ರಾಜಣ್ಣ, ಲಕ್ಷ್ಮೀಶ, ಲಕ್ಷ್ಣಣ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಟ್ಟಣದ ಜನತೆ ನೀಡಿರುವ ಪಪಂಯ ಅಧಿಕಾರವು ಪಟ್ಟಣದ ಅಭಿವೃದ್ದಿಗೆ ಸದಾ ಮೀಸಲಾಗಿದೆ. ನನಗೆ ಬೆಂಬಲ ನೀಡಿದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮತ್ತು ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರ ಸದಸ್ಯರಿಗೆ ತುಂಬು ಹೃದಯದ ಧನ್ಯವಾದ. ಅಧಿಕಾರಿ ವರ್ಗ ಮತ್ತು ಸದಸ್ಯರ ಸಹಕಾರ ಪಡೆದು ಅಭಿವೃದ್ದಿಗೆ ಆದ್ಯತೆ ನೀಡುತ್ತೇವೆ.
-ಮಂಜುಳಾ ಸತ್ಯನಾರಾಯಣ್, ಪಪಂ ನೂತನ ಅಧ್ಯಕ್ಷೆ, ಕೊರಟಗೆರೆ.
ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಿರುವ ಪಟ್ಟಣದ ಜನತೆಯ ಬೇಡಿಕೆಯಂತೆ ಪಪಂಯ ಆಡಳಿತ ಯಂತ್ರ ಸಮಗ್ರವಾಗಿ ನಡೆಯಲಿದೆ. ಕುಡಿಯುವ ನೀರು ಮತ್ತು ಸ್ವಚ್ಛತೆಯ ಜೊತೆ ಉತ್ತಮ ಆರೋಗ್ಯಕ್ಕೆ ಆದ್ಯತೆ ನೀಡುತ್ತೇವೆ. ಜೆಡಿಎಸ್ ಪಕ್ಷದ ಶಾಸಕರು, ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದ.
-ಭಾರತಿಸಿದ್ದಮಲ್ಲಪ್ಪ, ಪಪಂ ನೂತನ ಉಪಾಧ್ಯಕ್ಷೆ, ಕೊರಟಗೆರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ