ಕೊರಟಗೆರೆ : ಕೊರೋನಾ ಲಸಿಕೆ ಸಂಗ್ರಹಕ್ಕೆ ಸೂಚನೆ

 ಕೊರಟಗೆರೆ : 

      ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಮರುಕಳಿಸಿದ್ದು, ಜನರನ್ನು ರೋಗದಿಂದ ರಕ್ಷಿಸುವ ಬಗ್ಗೆ ಮತ್ತು ಬೇಸಿಗೆ ಆರಂಭದಲ್ಲಿ ಕುಡಿಯುವ ನೀರಿನ ಆದ್ಯತೆಗೆ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಡಾ. ಜಿ. ಪರಮೇಶ್ವರ ತಿಳಿಸಿದರು.

      ಅವರು ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಟಾಸ್ಕ್‍ಫೋರ್ಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈಗಾಗಲೇ ತಾಲ್ಲೂಕಿನಲ್ಲಿ ಕೋವಿಡ್ ರೋಗವು ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಲು ಹಾಗೂ ಜನರಿಗೆ ಮನವರಿಕೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜನರಿಗೆ ರೋಗನಿರೋಧಕ ಚುಚ್ಚು ಮದ್ದು ನೀಡಲು ಔಷಧಿ ಸಂಗ್ರಹಣೆಗೆ ಸೂಚಿಸಲಾಗಿದೆ. ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 15ನೇ ಹಣಕಾಸು ಯೋಜನಾ ಮೊತ್ತವನ್ನು ಕುಡಿಯುವ ನೀರಿಗೆ ಹೆಚ್ಚಾಗಿ ಬಳಸುವಂತೆ ಗ್ರಾಮ ಪಂಚಾಯತಿಗಳಿಗೆ ಆದೇಶಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

      ಕ್ಷೇತ್ರದ ಪ್ರತಿ ಗ್ರಾಮವನ್ನು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಮತ್ತು ನಿವೇಶನ, ವಸತಿ ಹೀನರಿಗೆ ಮನೆ ನಿರ್ಮಿಸಿ ಕೊಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಅದಕ್ಕಾಗಿ 18 ಗ್ರಾಮಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಗುರ್ತಿಸಿ ಮನೆ ನಿರ್ಮಾಣಕ್ಕಾಗಿ ಇಂದು ಗುದ್ದಲಿ ಪೂಜೆಯನ್ನು ಮಾಡಿದ್ದೇವೆ. ಅತ್ಯಂತ ಸಂತಸ ಸುದ್ದಿ ಎಂದರೆ 2008 ರಲ್ಲಿ ತಾವು ಶಾಸಕನಾಗಿದ್ದ ಸಂದರ್ಭದಲ್ಲಿ ಪ್ರಾರಂಭ ಮಾಡಿದ್ದ ಐಟಿಐ ಸಂಸ್ಥೆಯಲ್ಲಿ ಇಂದು ಸ್ವಂತ ಕಟ್ಟಡದೊಂದಿಗೆ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೌಶಲ್ಯ ತರಭೇತಿಯನ್ನು ಪಡೆಯುತ್ತಿದ್ದಾರೆ. ಇದು ನಿರುದ್ಯೋಗ ಸಮಸ್ಯೆ ನಿವಾರಣೆÉಗೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ. ಹಿಂದಿನ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರದಲ್ಲಿ ಕೌಶಲ್ಯ ಅಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಿ ಅದಕ್ಕಾಗಿ ವಿಶೇಷ ನಿಗಮಮಂಡಳಿಯನ್ನೆ ರಚಿಸಲಾಗಿತ್ತು. ಅದೇ ರೀತಿಯಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಾರಂಭಿಸಿದ ಕಿತ್ತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಲವು ವಿದ್ಯಾರ್ಥಿನಿಯರ ಭವಿಷ್ಯ ರೂಪಿಸುತ್ತಿದ್ದು, ಇದರ ಮೂಲಭೂತ ಸೌಕರ್ಯಕ್ಕಾಗಿ ಅನುದಾನವನ್ನು ನೀಡಲಾಗುವುದು ಎಂದರು.

      ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಕಾರ್ಖಾನೆ ನಿರ್ಮಿಸಿ ಹಲವು ನಿರುದ್ಯೋಗಿ ಯುವಕ ಯುವಕಿಯರಿಗೆ ಉದ್ಯೋಗ ಕಲ್ಪಿಸುವ ಆಕಾಂಕ್ಷೆ ಹೊಂದಲಾಗಿದ್ದರೂ ಕೈಗೂಡಲಿಲ್ಲ. ಅದಕ್ಕಾಗಿ ನಿರುದ್ಯೋಗ ನೀಗಿಸುವ ಮತ್ತೊಂದು ಯೋಜನೆಯಾಗಿ ಇಡೀ ರಾಜ್ಯದಲ್ಲೇ ಆರು ಕೇಂದ್ರಗಳಿಗೆ ಮಂಜೂರಾಗಿದ್ದ ಏಕಲವ್ಯ ವಸತಿ ಶಾಲೆಯನ್ನು 2013 ರಲ್ಲಿ ಬಜ್ಜನಹಳ್ಳಿಯಲ್ಲಿ ಪ್ರಾರಂಭಿಸಲಾಯಿತು. ಅದೇ ರೀತಿಯಾಗಿ ಕೋಳಾಲ ಮತ್ತು ಸಿದ್ದರಬೆಟ್ಟಗಳಲ್ಲಿ ಇಂದಿರಾ, ಅಂಬೇಡ್ಕರ್ ವಸತಿಶಾಲೆ ಸೇರಿದಂತೆ, ಹಲವು ಕಡೆ ವಸತಿಶಾಲೆಗಳನ್ನು ಪ್ರಾರಂಭಿಸಲಾಗಿದೆ. ಆದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಉದ್ಯೋಗಸ್ತ ಯುವಕರಾಗಿ ಹೊರಹೊಮ್ಮುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮೀನುಗಾರರಿಗೆ ಫಲಾನುಭವಿ ಕಿಟ್‍ಗಳನ್ನು, ತಾ.ಪಂ ಸಮುದಾಯ ಭವನದಲ್ಲಿ ತುಮುಲ್ ವತಿಯಿಂದ ಹಾಲು ಉತ್ಪಾದಕರಿಗೆ ಚೆಕ್ ಗನ್ನು, ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಬಳಿಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಟೂಲ್‍ಕಿಟ್‍ಗಳನ್ನು ವಿತರಿಸಲಾಯಿತು.

      ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ತಹಸೀಲ್ದಾರ್ ಗೋವಿಂದರಾಜು, ಇಒ ಶಿವಪ್ರಕಾಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ ನಾರಾಯಣ, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್ ದಿನೇಶ್, ಯುವಾಧ್ಯಕ್ಷ ವಿನಯ್‍ಕುಮಾರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಪ.ಪಂ ಸದಸ್ಯರುಗಳಾದ ಎ.ಡಿ ಬಲರಾಮಯ್ಯ, ಕೆ.ಆರ್ ಓಬಳರಾಜು, ನಾಗರಾಜು, ನಂದೀಶ್, ಮಾಜಿ ಉಪಾಧ್ಯಕ್ಷ ಕೆ.ವಿ ಮಂಜುನಾಥ್, ಸದಸ್ಯ ಸೈಯದ್‍ಸೈಫುಲ್ಲಾ, ಮುಖಂಡರುಗಳಾದ ಹೆಚ್.ಎಂ ರುದ್ರಪ್ರಸಾದ್, ಗಣೇಶ್, ಮಂಜುನಾಥ್, ಮಕ್ತಿಯಾರ್ ಸೇರಿದಂತೆ ಇತರರು ಹಾಜರಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap