ಕೊರಟಗೆರೆ :
ಕೊರಟಗೆರೆ ಕ್ಷೇತ್ರದ ಜನತೆಯ ಆರ್ಶಿವಾದದಿಂದ ಡಾ.ಜಿ.ಪರಮೇಶ್ವರ್ ಈಗಾಗಲೆ ಕರ್ನಾಟಕದ ಡಿಸಿಎಂ ಆಗಿದ್ದಾರೆ. ಜನತೆಯ ವಿಶ್ವಾಸದಿಂದ ಮತ್ತೊಮ್ಮೆ ಶಾಸಕನಾಗಿ ಕರುನಾಡಿನ ಮುಖ್ಯಮಂತ್ರಿ ಆದರೆ ಕಲ್ಪತರು ನಾಡಿನ ಜೊತೆ ಕೊರಟಗೆರೆ ಕ್ಷೇತ್ರದ ಅಭಿವೃದ್ದಿ ದ್ವಿಗುಣ ಆಗಲಿದೆ ಎಂಬುದೆ ನನ್ನ ಅಪೇಕ್ಷೆ ಎಂದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ದೊಡ್ಡಸಾಗ್ಗೆರೆಯಲ್ಲಿ ಡಿಸಿಸಿ ಬ್ಯಾಂಕಿನಿಂದ ಸೋಮವಾರ ಏರ್ಪಡಿಸಲಾಗಿದ್ದ 18ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ 16 ಗ್ರಾಮಗಳ 344 ರೈತರಿಗೆ 1 ಕೋಟಿ 67 ಲಕ್ಷ ರೂ. ಸಾಲ ವಿತರಣೆ ವೇಳೆ ಮಾತನಾಡಿದರು.
ವಿಶ್ವಾಸದಿಂದ ನಾನು ಎಲ್ಲ ಪಕ್ಷದ ನಾಯಕರ ಜೊತೆ ಇರ್ತೀನಿ. ಅದೇ ರಾಜಕೀಯ ಬಂದಾಗ ನಮ್ಮ ಪಕ್ಷವೆ ನಮಗೆ ಮುಖ್ಯ. ವಿಶ್ವಾಸವೆ ಬೇರೆ, ರಾಜಕೀಯವೆ ಬೇರೆ. ಎರಡನ್ನು ಬೇರೆಸುವ ಪ್ರಯತ್ನ ಬೇಡ. ನಾನು ಮತ್ತು ಪರಮೇಶ್ವರ್ ಉತ್ತಮ ಸ್ನೇಹಿತರು. ನಮ್ಮಿಬ್ಬರ ನಡುವೆ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಜನತೆ ಅದನ್ನು ನಂಬದೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‍ರನ್ನು ಮತ್ತೊಮ್ಮೆ ಕೊರಟಗೆರೆ ಕ್ಷೇತ್ರದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಲ್ಪತರು ನಾಡಿನ ಸಹಕಾರಿ ಕ್ಷೇತ್ರವು ಕರ್ನಾಟಕ ರಾಜ್ಯಕ್ಕೆ ಮಾದರಿ ಆಗಿದೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣ ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಕರ್ನಾಟಕ ರಾಜ್ಯದ ಸಹಕಾರಿ ಸಚಿವರಾಗಿ ರೈತರ ಸೇವೆ ಮಾಡುವ ಶಕ್ತಿಯನ್ನು ಜನತೆ ನೀಡಲಿ. ಪ್ರಪಂಚದಲ್ಲಿ ಯಾವುದೇ ಬ್ಯಾಂಕ್ ಬಡ್ಡಿ ರಹಿತ ಸಾಲವನ್ನು ರೈತರಿಗೆ ನೀಡುತ್ತಿಲ್ಲ. ಆದರೆ ಡಿಸಿಸಿ ಬ್ಯಾಂಕ್ ನಮ್ಮ ತುಮಕೂರು ಜಿಲ್ಲೆಯ ರೈತರಿಗೆ ನೀಡುತ್ತಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ರೈತರ 50 ಸಾವಿರ ರೂವರೆಗಿನ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್ ಪಕ್ಷ ರೈತರ ಹಾಗೂ ಕಾರ್ಮಿಕರ ಪರವಾಗಿದೆ ಎಂದು ಸಾಬೀತು ಮಾಡಿತು. ಆದರೆ ಬಿಜೆಪಿ ಸರಕಾರ ರೈತರ ವಿರೋಧಿ ಮಾರಕ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ರೈತ ವಿರೋಧಿ ಕಾಯ್ದೆಗಳು ವಾಪಸ್ ಪಡೆಯುವಂತೆ ಕಳೆದ 3 ತಿಂಗಳುಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ರೈತರ ಪರವಾಗಿ ನಿಲ್ಲದೆ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಜಂಟಿ ನಿಬಂಧಕ ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೆಶಕ ಹನುಮಾನ್, ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಗ್ರಾಪಂ ಅಧ್ಯಕ್ಷ ರಾಮಣ್ಣ, ಉಪಾಧ್ಯಕ್ಷೆ ಗಂಗರಾಜಮ್ಮ, ವಿಎಸ್‍ಎಸ್‍ಎನ್ ಅಧ್ಯಕ್ಷ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಹೇಶಕುಮಾರ್, ಮೇಲ್ವಿಚಾರಕ ಬೋರಣ್ಣ, ತಿಮ್ಮಯ್ಯ ಸೇರಿದಂತೆ ಇತರರು ಇದ್ದರು.
ಚಾಕಲೇಟ್ ಮಾರುವ ಮಾಲೀಕ ತನ್ನದೆ ಬೆಲೆ ನಿಗದಿ ಪಡಿಸುತ್ತಾನೆ. ರೈತ ಬೆಳೆಯುವ ಬೆಳೆಗಳಿಗೆ ದಲ್ಲಾಲಿ ಬೆಲೆ ನಿಗದಿ ಪಡಿಸುತ್ತಾನೆ. ರೈತರ ಪರವಾಗಿ ಕೆಲಸ ಮಾಡುವ ಸರಕಾರಕ್ಕೆ ಜನರು ಬೆಂಬಲ ನೀಡಬೇಕಾಗಿದೆ. ರೈತರು ವ್ಯವಸಾಯದ ಜೊತೆಯಲ್ಲಿ ಉಪ ಕಸುಬುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಆರ್ಥಿಕವಾಗಿ ಸಬಲರಾಗಬೇಕಾಗಿದೆ.
-ಕೆ.ಎನ್.ರಾಜಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ತುಮಕೂರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
