ಕೊರಟಗೆರೆ : ರಿಕ್ರಿಯೇಷನ್ ಕ್ಲಬ್ ಹೆಸರಲ್ಲಿ ನಿತ್ಯ ಜೂಜಾಟ

ಕೊರಟಗೆರೆ :

      ಮನರಂಜನೆಯ ನೆಪದಲ್ಲಿ ತೆರೆಯಲಾಗಿರುವ ರಿಕ್ರಿಯೇಷನ್ ಕ್ಲಬ್‍ಗಳು ಕೋವಿಡ್-19 ತೀವ್ರತೆಯ ನಡುವೆಯೂ ಅಂತರ್ ಜಿಲ್ಲಾ-ಅಂತಾರಾಜ್ಯಗಡಿ ಭಾಗಗಳಿಂದ ಬರುತ್ತಿರುವ ನೂರಾರು ಜನರನ್ನು ತಡೆಯುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಇತ್ತೀಚೆಗೆ ಎಲ್ಲಾ ರಿಕ್ರಿಯೇಷನ್ ಕ್ಲಬ್‍ಗಳನ್ನು ಮುಚ್ಚಿಸಿದ್ದಾರೆ.

     ಕೊರಟಗೆರೆ ತಾಲ್ಲೂಕಿನಲ್ಲಿ 4 ದಿಕ್ಕುಗಳಿಗೂ ಒಂದೊಂದರಂತೆ 4 ರಿಕ್ರಿಯೇಷನ್ ಕ್ಲಬ್‍ಗಳು ಎಗ್ಗಿಲದೆ ನಡೆಯುತ್ತಿವೆ. ಮನರಂಜನೆ ನೆಪಹೂಡಿ ಕಾನೂನಾತ್ಮಕವಾಗಿ ನಡೆಯುತ್ತಿರುವ ಈ ರಿಕ್ರಿಯೇಷನ್ ಕ್ಲಬ್‍ಗಳ ನಿಜ ಬಣ್ಣ ಸಾರ್ವಜನಿಕವಾಗಿ ಬಯಲಾಗಿದೆ. ಕೊರೋನಾ ಸಂದರ್ಭದಲ್ಲಾದರೂ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ದಿನಂಪ್ರತಿ ನಮ್ಮ ಊರಿನ ಕಡೆ ಬಂದು ಹೋಗುತ್ತಿದ್ದರೆ ನಮ್ಮ ಗತಿ ಏನು ಎಂದು ಸಾರ್ವಜನಿಕರ ಆರೋಪಗಳ ಸುರಿಮಳೆಯಾಗುತ್ತಿದೆ. ಈಗ ಪೊಲೀಸ್ ಎಚ್ಚೆತ್ತುಕೊಂಡಿದ್ದು, ಹೊಸ ಸರ್ಕಲ್ ಇನ್‍ಸ್ಪೆಕ್ಟರ್ ಸಿದ್ದರಾಮೇಶ್ವರ್.ಎಸ್ ಅವರ ಮಾರ್ಗದರ್ಶನದಂತೆ ಪಿಎಸೈ ಮುತ್ತರಾಜು ಸ್ಥಳಕ್ಕೆ ಧಾವಿಸಿ ಕ್ಲಬ್‍ಗಳನ್ನು ಮುಚ್ಚಿಸಿದ್ದಾರೆ.

      ಕೊರಟಗೆರೆ ತಾಲ್ಲೂಕಿನಲ್ಲಿ ತುಮಕೂರು-ಮಧುಗಿರಿ ಸಂಪರ್ಕ ಕಲ್ಪಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗಡಿ ಭಾಗವಾಗಿರುವ ಬೈರೇನಹಳ್ಳಿಯಲ್ಲಿ ಒಂದು, ಹೊಳವನಹಳ್ಳಿ- ಬಿ.ಡಿ ಪುರ ಮಾರ್ಗ ಮಧ್ಯೆ ಒಂದು ಕಳೆದ 6 ತಿಂಗಳ ಹಿಂದೆ ಪ್ರಾರಂಭವಾಗಿವೆ. ತೋವಿನಕೆರೆ ಕೇಂದ್ರ ಭಾಗದಲ್ಲಿ 2 ರಿಕ್ರಿಯೇಷನ್‍ಗಳು ಕಳೆದ 1 ವರ್ಷಗಳಿಂದ ನಡೆದುಕೊಂಡು ಬರುತ್ತಿವೆ. ಎಲ್ಲಾ ರಿಕ್ರಿಯೇಷನ್ ಕ್ಲಬ್‍ಗಳಲ್ಲೂ ನೂರಾರು ಜನ ತುಂಬಿ ತುಳುಕುತ್ತಿದ್ದಾರೆ. ಯಾರೊಬ್ಬರೂ ಕೊರೋನ ಲೆಕ್ಕಿಸದೆ ಎಲ್ಲಾ ಟೇಬಲ್‍ಗಳಲ್ಲೂ ಜನವೋ ಜನ. ಇದನ್ನು ಅರಿತ ಪೊಲೀಸ್ ಇಲಾಖೆ ಎಲ್ಲಾ ರಿಕ್ರಿಯೇಷನ್‍ಗಳನ್ನು ಕ್ಲೋಸ್ ಮಾಡಿಸಿದ್ದಾರೆ.

      ರಿಕ್ರೀಯೇಷನ್ ಕ್ಲಬ್‍ಗಳ ಮೂಲ ಉದ್ದೇಶ ಮನೋರಂಜನೆ, ಮನೋರಂಜನೆಗೆ ಆಯ್ದ ವ್ಯಕ್ತಿಗಳು ಸದಸ್ಯರಾಗಿ ಗುಂಪು ರಚಿಸಿಕೂಂಡು ಸರ್ಕಾರದ ನೀತಿ ಅನ್ವಯ ತಾಲ್ಲೂಕು ಉಪನೋಂದಣಾಧಿಕಾರಿಗಳ ಕಛೇರಿ ಹಾಗೂ ಜಿಲ್ಲಾ ನೋಂದಣಿಯ ಜೊತೆಗೆ ಪೊಲೀಸ್, ಗ್ರಾಮ ಪಂಚಾಯ್ತಿ ಅನುಮತಿಯ ಮೇರೆಗೆ ಹೈಕೋರ್ಟ್‍ನಿಂದ ಮನೋರಂಜನೆ ನೆಪ ಹೂಡಿ, ಅನುಮತಿ ಪಡೆದುಕೊಳ್ಳುವ ರಿಕ್ರಿಯೇಷನ್‍ಗಳು ಕೇರಂಬೋರ್ಡ್, ವಾಲಿಬಾಲ್, ಖೊಖೊ, ಕಬ್ಬಡಿ, ಬ್ಯಾಡ್ಮಿಂಟನ್ ಜೊತೆಗೆ ರಮ್ಮಿ ಇಸ್ಪೀಟ್ ಆಡುವ ಕಾನೂನಾತ್ಮಕವಾಗಿ ಅನುಮತಿ ಪಡೆದಿರುತ್ತಾರೆ. ಆದರೆ ಬಹುತೇಕ ರಿಕ್ರ್ರಿಯೇಷನ್‍ಗಳಲ್ಲಿ ಬೇರೆ ಆಟಗಳಿಗಿಂತ ಇಸ್ಪೀಟ್ ಆಟಕ್ಕೆ ಹೆಚ್ಚು ಒತ್ತು ನೀಡುವುದಲ್ಲದೆ, ಇತ್ತೀಚೆಗೆ ಕೇವಲ ಇಸ್ಪೀಟ್ ಆಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎಂಬುದು ಸಾರ್ವಜನಿಕರ ವಾದವಾಗಿದೆ.

ಬರ ಪೀಡಿತ ಪ್ರದೇಶಗಳಲ್ಲಿಯೇ ಹೆಚ್ಚು ರಿಕ್ರಿಯೇಷನ್‍ಗಳು :

      ತುಮಕೂರು ಜಿಲ್ಲೆ ಮೂಲತಃ ಬಯಲು ಸೀಮೆ ಪ್ರದೇಶ, ಮಳೆ ಕಡಿಮೆ. ಸತತ 20-25 ವರ್ಷಗಳಿಂದ ಬರಗಾಲ ಪೀಡಿತ ಪ್ರದೇಶ ಎಂದು ಘೋಣೆಯಾಗಿದೆ. ಮಳೆ-ಬೆಳೆಗಳಿಲ್ಲದೆ ಅಂತರ್ ಜಲ ಮಟ್ಟ ಕುಸಿದು, ಜನರು ತೋಟ-ತುಡಿಕೆ ಕಳೆದುಕೊಂಡು, ಸಾಲ-ಸೋಲ ಮಾಡಿ ಬಡತನ ರೇಖೆಗಿಂತ ಕೆಳವರ್ಗದ ಜನರೆ ಹೆಚ್ಚಿದ್ದಾರೆ. ಈ ತಾಲ್ಲೂಕಿನಲ್ಲಿಯೆ ಹೆಚ್ಚು ರಿಕ್ರಿಯೇಷನ್ ಕ್ಲಬ್‍ಗಳು ಪ್ರಾರಂಭವಾಗುತ್ತಿವೆ. ಅಷ್ಟೇ ಅಲ್ಲದೆ, ಇನ್ನೂ 6 ಪ್ರಾರಂಭಿಸಲು ಯೋಜನೆ ನಡೆಯುತಿದ್ದು, ಕೋಳಾಲ ಭಾಗ ಒಂದರಲ್ಲೇ ನಾಲ್ಕು, ಹೊಳವನಹಳ್ಳಿ ಒಂದು, ಕಸಬಾ ಒಂದು ಹೊಸದಾಗಿ ತೆರೆಯಲು ಎಲ್ಲಾ ಸಿದ್ದತೆಗಳು ನಡೆದಿದೆ ಎನ್ನಲಾಗುತ್ತಿದೆ. ಮುಂದೆ ಕೊರಟಗೆರೆ ರಿಕ್ರಿಯೇಷನ್‍ಗಳ ತಾಣವಾಗಿ ಮಾರ್ಪಡಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದೆ ಎಂದು ಕೆಲವು ಪ್ರಜ್ಞಾವಂತರು ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ಪೀಟ್ ದಂಧೆ ಆರೋಪ  :

      ಇಲ್ಲಿನ ಬಹಳಷ್ಟು ಸಾರ್ವಜನಿಕರ ದೊಡ್ಡ ಆರೋಪ ಏನೆಂದರೆ ರಿಕ್ರಿಯೇಷನ್ ಕ್ಲಬ್‍ಗಳು ಪೂರ್ಣ ಇಸ್ಪೀಟ್ ಅಡ್ಡೆಗಳಾಗಿವೆ. ಮನೋರಂಜನೆಯ ಹೆಸರಿನಲ್ಲಿ ಕೋರ್ಟಿಗೆ ಸುಳ್ಳು ಮಾಹಿತಿ ನೀಡಿ, ಅನುಮತಿ ಪಡೆಯುತ್ತಿವೆ. ಇಲ್ಲಿ ಇತರೆ ಮನೋರಂಜನೆ ಹೆಸರಿನಲ್ಲಿ ಹೇಳಿಕೊಳ್ಳುವ ಯಾವ ಆಟಗಳು ನಡೆಯುತ್ತಿಲ್ಲ. ಕೇವಲ ಇಸ್ಪಿಟ್ ಆಟ ಮಾತ್ರ ನಡೆಯುತ್ತಿದೆ. ಅದು ರಮ್ಮಿ ಹೆಸರಿನಲ್ಲಿ, ಎರಡು ಕೌಂಟರ್ ತೆರೆಯಲಾಗುತ್ತದೆ. ಒಂದರಲ್ಲಿ ಸಿಸಿ ಕ್ಯಾಮರಾಗಳು ಅಳವಡಿಸಿರುತ್ತಾರೆ. ಇನ್ನೊಂದೆಡೆ ಕ್ಯಾಮರಾ ಇಲ್ಲ. ಅಲ್ಲಿ ಹಣ ಕಟ್ಟಿ ಆಟವಾಡುತ್ತಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇಷ್ಟೆ ಅಲ್ಲದೆ ಹೊರಗಡೆ ಇಸ್ಪೀಟ್ ಆಡುತಿದ್ದ ಎಷ್ಟೋ ಜನರು ಪೊಲೀಸರ ಕಾಟವಿರೋದಿಲ್ಲ ಎಂದು ರಿಕ್ರಿಯೇಷನ್ ಕ್ಲಬ್ ಮೊರೆ ಹೋಗುತಿದ್ದಾರೆ ಎಂದು ಸಹ ಆರೋಪಿಸುತಿದ್ದಾರೆ.

ಹಣದ ರೂಪದಲ್ಲಿ ಟೋಕನ್ ಹಂಚಿಕೆ :

      ರಿಕ್ರಿಯೇಷನ್ ಕ್ಲಬ್‍ಗಳಲ್ಲಿ ಹಣದ ವ್ಯವಹಾರ ಕಾನೂನು ಬಾಹಿರ ಎಂದು ಯಾಮಾರಿಸಲು ಟೋಕನ್ ಹಂಚಿಕೆಯಾಗುತ್ತಿದೆ. ವಿವಿಧ ಕಲರ್ ಟೋಕನ್‍ಗಳು, ಒಂದೊಂದು ಕಲರ್ ಟೋಕನ್‍ಗೆ ಒಂದೊಂದು ಮೌಲ್ಯ ನಿರ್ಧರಿಸಲಾಗಿದೆ. 50, 100, 200, 500, 2000 ಈ ಟೋಕನ್‍ಗಳು ಆಟದ ವ್ಯವಹಾರದಲ್ಲಿ ಚಾಲ್ತಿಯಲ್ಲಿವೆ. ಇವುಗಳನ್ನು ಆಟದಲ್ಲಿ ಬಳಸಿಕೊಳ್ಳುತ್ತಾರೆ. ಇದು ಕಾನೂನಿನ ಕಣ್ಣಿಗೆ ಮಣ್ಣು ಎರಚುವ ಆಟ. ರಿಕ್ರಿಯೇಷನ್ ಕ್ಲಬ್‍ಗಳು ತುಂಬಾ ಅವ್ಯವಹಾರ ನಡೆಸುತ್ತಿವೆಂದು ಸಾರ್ವಜನಿಕರು ಆರೋಪಿಸುತಿದ್ದಾರೆ.

ಗ್ರಾಹಕರಿಗೆ ಪ್ರತಿದಿನ ಗುಂಡು, ವಾರಕ್ಕೆ ಮೂರು ದಿನ ತುಂಡು :

      ಪ್ರತಿದಿನ ರಿಕ್ರಿಯೇಷನ್ ಕ್ಲಬ್‍ಗೆ ಬರುವ ಆಟಗಾರರಿಗೆ ಬೆಳಗ್ಗೆ ತಿಂಡಿ, 2 ಗಂಟೆಗೆ 1 ಬಾರಿ ಟೀ, ಕಾಫೀ, ಮಧ್ಯಾಹ್ನದ ಊಟ, ಜೊತೆಗೆ ಗುಂಡು ಸರಬರಾಜು ಆಗುತ್ತದೆ ಎಂದು ಆರೋಪ ಇದೆ. ವಾರದಲ್ಲಿ 3 ದಿನ ಬಾಡೂಟ ವ್ಯವಸ್ಥೆ ಮಾಡಿ, ಜನರನ್ನು ಸೆಳೆಯುವ ತಂತ್ರ ಮಾಡಲಾಗುತ್ತದೆ ಎಂದು ಸ್ಥಳಿಯ ನಾಗರಿಕರು ಆರೋಪಿಸುತ್ತಾರೆ.

ಅಂತರ್’ಜಿಲ್ಲೆ ಹಾಗೂ ಅಂತಾರಾಜ್ಯ ಜನ ಭಾಗಿ :

      ಕೊರಟಗೆರೆ ತಾಲ್ಲೂಕಿನ ನಾಲ್ಕು ಭಾಗಗಳಿಗೂ ಅಂತರ್‍ಜಿಲ್ಲಾ ಹಾಗೂ ಅಂತಾರಾಜ್ಯ ಜನರು ಭಾಗಿಯಾಗುತ್ತಿದ್ದು, ಬೈರೇನಹಳ್ಳಿಯ ಕ್ಲಬ್‍ಗೆ ಗೌರಿಬಿದನೂರು, ಕೊಡಗೇನಹಳ್ಳಿ, ಹಿಂದೂಪುರ, ತೊಂಡೆಬಾವಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಾಗೇಪಲ್ಲಿ ಸೇರಿದಂತೆ ಹಲವು ಕಡೆಯಿಂದ ಜನ ಬರುತ್ತಿದ್ದಾರೆ. ಹೊಳವನಹಳ್ಳಿ ಕ್ಲಬ್‍ಗೆ ತೊಂಡೆಬಾವಿ, ಗೌರಿಬಿದನೂರು, ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದಾಬಸಪೇಟೆ ಜನರ ಸಂಪರ್ಕ ಹೆಚ್ಚು. ಉಳಿದಂತೆ ತೋವಿನಕೆರೆ ಕ್ಲಬ್‍ಗಳಿಗೆ ತುಮಕೂರು, ಕಳ್ಳಂಬೆಳ್ಳ, ಶಿರಾ, ಬಡವನಹಳ್ಳಿ, ಆಂಧ್ರ ಭಾಗದ ರೊಳ್ಳೆ, ರತ್ನಗಿರಿ ಭಾಗದ ಜನ ಭಾಗಿಯಾಗಲಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಕೋವಿಡ್ ಕಾಳಜಿ ಇಲ್ಲದ ಜನ ಹೊರಗಿನಿಂದ ಬರುತ್ತಿದ್ದು, ನಮ್ಮಗಳ ಗತಿ ಏನು ಎಂಬುದು ಸ್ಥಳೀಯರ ಆರೋಪವಾಗಿದೆ.

ರಿಕ್ರಿಯೇಷನ್ ಕ್ಲಬ್‍ಗಳಿಗೆ ನಂಬಲಾಗದಷ್ಟು ಹಣದ ಹೊಳೆ :

      ರಿಕ್ರಿಯೇಷನ್ ಕ್ಲಬ್‍ಗಳಲ್ಲಿ ಇಸ್ಪೀಟ್ ಆಟಕ್ಕೆ ಇಂತಿಷ್ಟು ಹಣ ಸಮಯ ಎಂದು ನಿಧರ್Àರಿಸಲಾಗಿದೆ. 1 ಟೇಬಲ್‍ಗೆ 1 ಗಂಟೆಗೆ 2800 ರೂ.ಗಳಂತೆ 10 ಜನರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಬೆಳಗ್ಗೆ 8 ಗಂಟೆಗೆ ಪ್ರಾರಂಭಗೊಂಡರೆ, ರಾತ್ರಿ 10 -11 ಗಂಟೆ ಆದರೂ ಆಶ್ಚರ್ಯವಿಲ್ಲ. 1 ಟೇಬಲ್‍ಗೆ 10 ಗಂಟೆ ಕಾಲ ಕೂತರೆ 28, 000 ರೂ. ಕನಿಷ್ಠ ಗಳಿಕೆ. 10 ಟೇಬಲ್ ಆದರೆ 2 ಲಕ್ಷದ 28 ಸಾವಿರ ರೂ. ಎಲ್ಲಾ ಕಳೆದರೂ 2 ಲಕ್ಷ ಬ್ಯಾಡ 1.5 ಲಕ್ಷ. ಇದೆಲ್ಲಾ ಬಿಟ್ಟರೂ 1 ಲಕ್ಷ ಗ್ಯಾರಂಟಿ ಒಂದು ದಿನಕ್ಕೆ. ಬೇರೆ ಕೆಲಸವೇಕೆ ಇಂತಹÀದೊಂದು ವ್ಯವಹಾರ ಮಾಡಿಕೊಂಡು 2 ತಿಂಗಳು ಯಾವುದೇ ಅಡೆತಡೆ ಇಲ್ಲದೆ ನಡೆದರೆ ಸಾಕು ಗುರು, ಯಾರಿಗುಂಟು, ಯಾರಿಗಿಲ್ಲ. ಹುಚ್ಚರ ಮದುವೆಯಲ್ಲಿ ಉಂಡೋನೆ ಜಾಣ, ಅಂಗಾಗಿದೆ ಈ ದುನಿಯಾ ಎಂದು ಸ್ಥಳೀಯರು ವ್ಯಂಗ್ಯವಾಡುತ್ತಿದ್ದಾರೆ.

ಕೋಳಾಲ ಭಾಗದಲ್ಲಿ ರಿಕ್ರಿಯೇಷನ್ ಕ್ಲಬ್ ಇಲ್ಲದಿದ್ದರೂ ಜೂಜಾಟ ಜೋರು :

     ಕೋಳಾಲ ಹೋಬಳಿಯಲ್ಲಿ ರಿಕ್ರಿಯೇಷನ್ ಕ್ಲಬ್‍ಗಳು ಇಲ್ಲದಿದ್ದರೂ, ಇಸ್ಪೀಟ್ ಹಾಗೂ ಹೆಡ್ ಅಂಡ್ ಟೇಲ್ಸ್ (ಬಿಲ್ಲೆ) ಆಟಕ್ಕೇನು ಕಡಿಮೆ ಇಲ್ಲ. ಈ ಭಾಗದಲ್ಲಿ ಸತತ 2-3 ವರ್ಷಗಳಿದಂಲೂ ಅವಿರತವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ನರಸಿಂಹನದು 2-3 ವರ್ಷಗಳಿಂದ ಹೆಡ್ ಅಂಡ್ ಟೇಲ್ಸ್ (ಬಿಲ್ಲೆ) ಆಟವಾದರೆ, ಉಮೇಶ್‍ನದು ಎ-ಬಿ ಇಸ್ಪೀಟ್ ಆಟ. ಇವರದು ದಿನಕ್ಕೊಂದು ಕಡೆ ಆಟ. ಹಳ್ಳ-ಕೊಳ್ಳ, ಅರಣ್ಯ ಪ್ರದೇಶ ಹಾಗೂ ಕೆಲವು ಒಂಟಿ ಮನೆಗಳು ಇವರ ಅಡ್ಡೆ. ಇನ್ನೂ 2-3 ಜನ ಸೇರಿ, ಕದ್ದು-ಮುಚ್ಚಿ ಪೋಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದಾರೆ ಎಂದು ಕೆಲವರ ಆರೋಪವಾಗಿದೆ.

ಸ್ತ್ರೀ ಶಕ್ತಿ ಸಂಘಗಳಿಂದ ವಿರೋಧ :

      ತಾಲ್ಲೂಕಿನಲ್ಲಿ ನಡೆಯುತ್ತಿರುವ ರಿಕ್ರಿಯೇಷನ್ ಕ್ಲಬ್‍ಗಳ ಬಗ್ಗೆ ಹಲವು ಸ್ತ್ರೀ ಶಕ್ತಿ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಇವುಗಳಿಂದ ಎಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಇವುಗಳ ವಿರುದ್ದ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಜೊತೆಗೆ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

ಮಾಜಿ ಉಪ ಮುಖ್ಯಮಂತ್ರಿಗಳು ಗರಂ :

ಮಾಜಿ ಉಪ ಮುಖ್ಯಮಂತ್ರಿ, ಡಾ.ಜಿ ಪರಮೇಶ್ವರ್ ಇತ್ತೀಚೆಗೆ ಪೋಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ತಮಗೆ ಸುಮಾರು ಕಡೆ ಕಾರ್ಯಕರ್ತರುಗಳಿಂದ ಆರೋಪ ಕೇಳಿಬಂದಿದೆ. ರಿಕ್ರಿಯೇಷನ್ ಕ್ಲಬ್‍ಗಳ ವಿರುದ್ದ ಶೀಘ್ರ ಕ್ರಮ ಜರುಗಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap