ಕೊರಟಗೆರೆ :
ಕೊರೋನಾದಂತಹ ಪರಿಸ್ಥಿತಿಯಲ್ಲೂ ಜನಸಾಮಾನ್ಯರಿಗೆ ಸ್ಪಂದಿಸದೆ ಬೇಕಾಬಿಟ್ಟಿ ಕೆಲಸ ಮಾಡಿದರೆ ನಡೆಯಲ್ಲ, ನಿಮ್ಮಗಳ ವಿರುದ್ದ ಕ್ರಮಕ್ಕೆ ಸರ್ಕಾರಕ್ಕೆ ವರದಿ ನೀಡಬೇಕಾಗುತ್ತದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಅಧಿಕಾರಿಗಳ ವಿರುದ್ದ ಗರಂ ಆದ ಘಟನೆ ತಾಪಂ ಕೆಡಿಪಿ ಸಭೆಯಲ್ಲಿ ನಡೆಯಿತು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರದ ಕೆಡಿಪಿ ಸಭೆಯಲ್ಲಿ ಪ್ರಗತಿ ಪರಿಶೀಲಿಸುತ್ತಾ ಸಭೆಗೆ ಸರಿಯಾದ ಮಾಹಿತಿ ತರದೆ, ಮುಂಜಾಗ್ರತೆ ಕ್ರಮಗಳ ಬಗ್ಗೆ ವರದಿ ನೀಡದ ತಾಲ್ಲೂಕು ವೈದ್ಯಾಧಿಕಾರಿ ವಿಜಯಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ಜಿಪಂ ಎಇಇ ಮಂಜುನಾಥ್, ರೇಷ್ಮೆ ಇಲಾಖೆ ಅಧಿಕಾರಿ ಲಕ್ಷ್ಮೀನರಸಿಂಹಪ್ಪ, ನರೇಗಾ ಸಹಾಯಕ ನಿರ್ದೇಶಕ ನಾಗರಾಜು, ಪಪಂ ಎಂಜಿನಿಯರ್ ರಘು, ಆರೋಗ್ಯ ನಿರೀಕ್ಷಕ ರೈಸ್ ಅಹಮದ್, ಸಿಡಿಪಿಓ ಅಂಬಿಕಾ, ಎತ್ತಿನಹೊಳೆ ಯೋಜನಾಧಿಕಾರಿ ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯತೆ ವಿರುದ್ದ ಹರಿಹಾಯ್ದರು. ಸಭೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಕೋವಿಡ್‍ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ನೀಡಿ, ಸರ್ಕಾರದ ಮಾರ್ಗಸೂಚಿ ಪಾಲಿಸದೆ, ಮುಂಜಾಗ್ರತೆ ಕ್ರಮಗಳ ಬಗ್ಗೆ ತಯಾರಿ ಮಾಡಿಕೊಳ್ಳದೆ ಇದ್ದುದು ಕಂಡು ಬಂದಿತು. ಜಿಪಂ ಎಇಇ ಮಂಜುನಾಥ್ ಕುಡಿಯುವ ನೀರಿನ ಬಗ್ಗೆ ಅಸರ್ಮಪಕ ಮಾಹಿತಿ ನೀಡಿದ್ದರು.
ಜಲ ಜೀವನ್ ಮಿಷನ್ ಯೋಜನೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ನೀರು ಸರಬರಾಜು ಮಾಡಿರುವ ಕಾಮಗಾರಿಗಳಲ್ಲಿ ಪಾರದರ್ಶಕತೆಯ ಲೋಪ ಕಾಣುವುದರೊಂದಿಗೆ ಸಿಡಿಪಿಓ ಅಂಬಿಕಾ ಅದರ ಬಗ್ಗೆ ಮಾಹಿತಿ ಪಡೆಯದೆ, ಕೇಂದ್ರಗಳಿಗೆ ಭೇಟಿ ನೀಡದೇ ಇರುವುದು ಕಂಡು ಬಂದಾಗ ಶಾಸಕರು ಗರಂ ಆದರು. ತೋಟಗಾರಿಕೆಯಲ್ಲಿ ದೊಡ್ಡರಂಗಮ್ಮ ಎನ್ನುವ ರೈತರಿಗೆ ಮಿನಿ ಟ್ರ್ಯಾಕ್ಟರ್‍ಗೆ ನೀಡಿದ ಸಹಾಯ ಧನವನ್ನು ಇಲಾಖೆಯ ಕಿರಿಯ ಸಹಾಯಕ ನಿರ್ದೇಶಕ ನಾಗರಾಜು ದುರುಪಯೋಗ ಮಾಡಿಕೊಂಡಿದ್ದು, ಈ ವಿಷಯವಾಗಿ ಹಣ ತಿಂದಿರುವ ನಾಗರಾಜು ಹಾಗೂ ಸಹಾಯಕ ನಿರ್ದೇಶಿಕಿ ಪುಷ್ಪಲತಾರವರ ವಿರುದ್ದ ಕರ್ತವ್ಯಲೋಪದಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತನಿಖೆಗೆ ಅಜೆಂಡಾವನ್ನು ಬರೆಸಲಾಯಿತು. ನರೇಗಾ ಮಾಹಿತಿಯಲ್ಲಿ 2.5 ಕೋಟಿ ರೂ.ಗಳ ತಪ್ಪು ಲೆಕ್ಕಾಚಾರ ಕಂಡು ಬಂದಿತು. ಈ ಬಗ್ಗೆ ನಾಗರಾಜುರವರನ್ನು ಪ್ರಶ್ನಿಸಿ ಶಾಲಾ ಕಾಪೌಂಡುಗಳಿಗೆ ಆದ್ಯತೆ ನೀಡುವಂತೆ ಆದೇಶಿಸಿದರು.
ಎತ್ತಿನ ಹೊಳೆ ಕಾಮಗಾರಿ : ಅಧಿಕಾರಿ ವಿರುದ್ದ ಗರಂ
ತಾಲ್ಲೂಕಿನಲ್ಲಿ ರೈತರ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳದೆ, ಅವರಿಗೆ ಪರಿಹಾರ ನೀಡದೆ, ಅವರ ಜಮೀನುಗಳಲ್ಲಿ ಪೈಪಲೈನ್ ಕಾಮಗಾರಿಗಳನ್ನು ಮಾಡಿದ್ದೀರಿ. ಕೂಡಲೆ ರೈತರಿಗೆ ಪರಿಹಾರ ನೀಡದಿದ್ದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಅಧಿಕಾರಿಗೆ ಎಚ್ಚರಿಸಿದರು. ಅಧಿಕಾರಿಗಳು ರೈತರ ಪರ ನಿಲ್ಲಬೇಕು, ಆದರೆ ನೀವು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದೀರಿ. ಇದರಿಂದ ಬಡ ರೈತರಿಗೆ ಅನ್ಯಾಯವಾಗುತ್ತದೆ, ನಿಮಗೆ ಒಳ್ಳೆಯದಾಗುವುದಿಲ್ಲ. ಬರಡು ಭೂಮಿಗೆ ನೀರು ತರುವ ಒಳ್ಳೆಯ ಕೆಲಸಕ್ಕೆ ಅಡ್ಡಿಯಾಗಬಾರದು ಎನ್ನುವ ನಮ್ಮ ಒಳ್ಳೆಯತನವನ್ನು ನೀವು ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ. ಜಿಲ್ಲೆಯಲ್ಲಿ ಶಾಸಕರು ಮತ್ತು ಲೋಕಸಭಾ ಸದಸ್ಯರನ್ನು ಮೊದಲು ಗಣನೆಗೆ ತೆಗೆದುಕೊಳ್ಳದಿದ್ದರೆ ಪರಿಣಾಮ ಎದುರಿಸುತ್ತೀರಿ ಎಂದು ಕೆಂಡಾಮಂಡಲವಾದರು.
ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ಮಾತನಾಡಿ, ಅಧಿಕಾರಿಗಳು ಬಡರೈತರ ಜೀವನದಲ್ಲಿ ಆಟವಾಡದೆ, ಕಾಮಗಾರಿಯಾಗಿರುವ ಭೂಮಿಗಳ ರೈತರಿಗೆ ಮೊದಲು ಪರಿಹಾರ ಧನವನ್ನು ನೀಡಲು ಮನವಿ ಮಾಡಿದರು. ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳಿಗೆ ಹೆಚ್ಚಾಗಿ ಸ್ಪಂದಿಸುವಂತೆ ಎಇಇ ಮಂಜುನಾಥರವರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಇಓ ಶಿವಪ್ರಕಾಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ