ಕೊರಟಗೆರೆ :
ಪಟ್ಟಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಬೀದಿಗಿಳಿದು ದ್ವಿಚಕ್ರ ವಾಹನ, ಕಾರು, ಬಸ್ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಹಾಗೂ ಗುಂಪುಕಟ್ಟಿ ಓಡಾಡುವವರಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸಿ ಚುರುಕು ಮುಟ್ಟಿಸಿದರು.
ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೊರೋನಾ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಈ ದಿಸೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಲಕ್ಷಿಸಿ, ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್, ದ್ವಿಚಕ್ರ ವಾಹನಗಳಲ್ಲಿ ಮಾಸ್ಕ್ ಧರಿಸದೆ ಚಲಿಸುವವರಿಗೆ ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೆ ಸಂಚರಿಸುತ್ತಿದ್ದವರಿಗೆ ತಹಸೀಲ್ದಾರ್ ಗೋವಿಂದ ರಾಜು, ಸಿಪಿಐ ಸಿದ್ದರಾಮೇಶ್ವರ್, ಪಿಎಸ್‍ಐ ಮುತ್ತುರಾಜು ಹಾಗೂ ಪ.ಪಂ.ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್ ರವರ ನೇತೃತ್ವದ ತಂಡ ವಾಹನಗಳನ್ನು ತಡೆದು ದಂಡ ವಿಧಿಸಿ ಸರ್ಕಾರದ ನಿಯಮ ಅನುಸರಿಸುವಂತೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಗೋವಿಂದರಾಜು, ಕೊರೋನಾ ಎರಡನೆ ಅಲೆ ದಿನೆ ದಿನೆ ಅತಿವೇಗವಾಗಿ ಹಬ್ಬುತ್ತಿದೆ. ಇದನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ಹರಸಾಹಸ ಪಡುತ್ತಿವೆ. ತಾಲ್ಲೂಕಿನಲ್ಲಿ ಪ್ರತಿ ದಿನ ಸೋಂಕಿತರ ಸಂಖ್ಯೆ 50 ಕ್ಕೂ ಹೆಚ್ಚು ದಾಟುತ್ತಿದೆ. ಸೋಂಕು ನಿಯಂತ್ರಿಸಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದ ಜೊತೆಗೆ, ಸ್ಯಾನಟೈಸರ್‍ನ್ನು ಬಳಸಬೇಕು ಎಂದು ಮನವಿ ಮಾಡಿದ ಅವರು, ಸಾರ್ವಜನಿಕರು ಮಾಸ್ಕ್ ಧರಿಸದೆ, ವ್ಯಕ್ತಿಗತ ಅಂತರ ಕಾಪಾಡದೆ, ಒಟ್ಟುಗೊಡುವುದು, ಸಭೆ ಸಮಾರಂಭ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮತ್ತು ಐಸಿಯು ಕೊರತೆಯಿಲ್ಲ. ಮುಂದಿನ ದಿನಗಳಲ್ಲಿ ಎಚ್ಚರ ವಹಿಸದಿದ್ದರೆ, ಹಾಸಿಗೆಗಳ ಹಾಗೂ ಐಸಿಯು ಕೊರತೆ ಉಂಟಾಗುತ್ತದೆ. ಇದರಿಂದ ಮುಂಜಾಗೃತಿಯಿಂದ ಎಚ್ಚರ ವಹಿಸಿ. ಈಗಾಗಲೆ ಸರ್ಕಾರದ ಮಾರ್ಗಸೂಚಿ ಅನ್ವಯ ಹಾಗೂ ಆದೇಶದ ಮೇರೆಗೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದು, 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ ಬಂದು ಲಿಸಿಕೆ ಹಾಕಿಸಿ ಕೊಳ್ಳಬೇಕು ಎಂದು ಮನವಿ ಮಾಡಿದರು.
ಸಿಪಿಐ ಸಿದ್ದರಾಮೇಶ್ವರ್ ಮಾತನಾಡಿ, ಸಾರ್ವಜನಿಕರು ತಮ್ಮಲ್ಲಿರುವ ರೋಗ ಲಕ್ಷಣಗಳನ್ನು ಮರೆ ಮಾಚುತ್ತಿರುವುದರಿಂದ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಜನಸಾಮಾನ್ಯರು ತಮ್ಮಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಇದ್ದರೂ, ಮರೆಮಾಚದೆ ಆಸ್ಪತ್ರೆಗಳಿಗೆ ಬಂದು ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.
ಪಿಎಸೈ ಮುತ್ತುರಾಜು ಮಾಹಿತಿ ನೀಡಿ, ಕೊರೋನಾ ಸೋಂಕು ನಿಯಂತ್ರಿಸಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಆಗಿಂದಾಗ್ಗೆ ಸ್ಯಾನಿಟೈಸರ್‍ನಿಂದ ಕೈ ಸ್ವಚ್ಛಗೊಳಿಸುವುದು ಹಾಗೂ ಗುಂಪುಗೂಡದೆ, ವ್ಯಕ್ತಿಗತ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಜನ ಸಾಮಾನ್ಯರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಕಠಿಣ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಸ್ವಯಂ ಪ್ರೇರಿತರಾಗಿ ನಿಯಮಗಳನ್ನು ಕಟ್ಟನಿಟ್ಟಾಗಿ ಪಾಲಿಸಲು ಮುಂದಾಗಬೇಕು. ತಪ್ಪಿದಲ್ಲಿ ಸರ್ಕಾರಿ ನಿಯಮ ಪಾಲಿಸುವಂತೆ ಹಾಗೂ ನಿಯಮ ಪಾಲಿಸದ ವ್ಯಕ್ತಿಗಳಿಗೆ ಸರ್ಕಾರಿ ನಿಯಮದಂತೆ ದಂಡ ಹಾಗೂ ಪ್ರಕರಣ ದಾಖಲಿಸಿಕೊಂಡು ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ.ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಕಂದಾಯಾಧಿಕಾರಿ ಎ.ಜಿ.ರಾಜು, ಪ.ಪಂ.ಆರೋಗ್ಯಾದಿಕಾರಿ ರೈಸ್ ಮಹಮದ್ ಸೇರಿದಂತೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪಪಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ