ಕೊರಟಗೆರೆ :
ದೊಡ್ಡಬಳ್ಳಾಪುರ ಪಟ್ಟಣದ ಖಾಸಗಿ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳರ ತಂಡ ಕೊರಟಗೆರೆ ತಾಲ್ಲೂಕಿನ ದೊಡ್ಡಸಾಗ್ಗೆರೆ ತಂಗುದಾಣದ ಬಳಿ ಚಿನ್ನ-ಬೆಳ್ಳಿ ಮತ್ತು ಹಣವನ್ನು ಹಂಚಿಕೊಳ್ಳುವ ವೇಳೆ ಕೋಳಾಲ ಕ್ರೈಂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ದೊಡ್ಡಸಾಗ್ಗೆರೆ ತಂಗುದಾಣದ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಗಳೆ ದೊಡ್ಡಬಳ್ಳಾಪುರದ ಮನೆಯ ಕಳ್ಳತನದ ಆರೋಪಿಗಳು. ಕೋಳಾಲ ಪೊಲೀಸ್ ಠಾಣೆಯ ಮುಖ್ಯಪೇದೆ ಮೋಹನಕುಮಾರ್ ಮತ್ತು ಜಯಸಿಂಹ ಆರೋಪಿಗಳನ್ನು ಪ್ರಶ್ನಿಸಿ ಪರಿಶೀಲನೆ ನಡೆಸಿದಾಗ ಬ್ಯಾಗಿನಲ್ಲಿದ್ದ ಬೆಳ್ಳಿಯ ಒಡವೆಗಳು ಪತ್ತೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಮಾವಿನಕೆರೆ ಗ್ರಾಮದ ಅನಿಲ್, ಕೊರಟಗೆರೆ ತಾಲ್ಲೂಕು ದೊಡ್ಡಸಾಗ್ಗೆರೆ ಗ್ರಾಮದ ಆನಂದ ಬಂಧಿತರು. ಇನ್ನೋರ್ವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕೃಷ್ಣನ ಪತ್ತೆಗಾಗಿ ಈಗಾಗಲೆ ಕೋಳಾಲ ಪಿಎಸೈ ನವೀನಕುಮಾರ್ ನೇತೃತ್ವದ ಪೊಲೀಸರ ತಂಡ ಬಲೆ ಬೀಸಿದೆ.
ದೊಡ್ಡಸಾಗ್ಗೆರೆ ಪ್ರಯಾಣಿಕರ ತಂಗುದಾಣದ ಬಳಿ ಆರೋಪಿಗಳಿಂದ 440 ಗ್ರಾಂನ ಒಂದು ಜೊತೆ ಬೆಳ್ಳಿದೀಪ, ದೀಪಾಲೆ ಕಂಬ, ಬೆಳ್ಳಿ ಲೋಟ, ಬೆಳ್ಳಿ ಕಳಸ, ಬೆಳ್ಳಿ ಆರತಿ ತಟ್ಟೆ, ಬೆಳ್ಳಿ ತಟ್ಟೆ ಮತ್ತು ತಿಪಟೂರಿನ ಇಂಟೇಲ್ ಮನಿ ಪ್ರೈವೈಟ್ ಲಿ.ನಲ್ಲಿ 21 ಗ್ರಾಂ ಚಿನ್ನದ ನೆಕ್ಲೇಸ್ ಸೇರಿ ಒಟ್ಟು 2 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳರಿಂದ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊರಟಗೆರೆ ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ