ಕೊರಟಗೆರೆ :
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಪೊಲೀಸರು ಸರ್ಪಗಾವಲು ಏರ್ಪಡಿಸಿ ಎಲ್ಲ ಕಡೆ ವಾಹನಗಳನ್ನು ಪರಿಶೀಲಿಸಿ ಹೊರಗೆ ಬಂದಿರುವುದಕ್ಕೆ ಸರಿಯಾದ ಕಾರಣ ನೀಡದ ದ್ವಿಚಕ್ರ ವಾಹನ, ಕಾರು ಸೇರಿದಂತೆ ಇನ್ನಿತರ ವಾಹನಗಳನ್ನು ಸೀಜ್ ಮಾಡುವ ಮೂಲಕ ಲಾಕ್‍ಡೌನ್ ಕಟ್ಟುನಿಟ್ಟಿನ ಕ್ರಮ ಕೈಕೊಂಡ ಘಟನೆ ಕೊರಟಗೆರೆ ತಾಲ್ಲೂಕಿನಲ್ಲಿ ನಡೆಯಿತು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಶರವೇಗದಲ್ಲಿ ಹಬ್ಬುತ್ತಿರುವ ಕೋವಿಡ್-19 ಸೋಂಕು ಪ್ರಕರಣಗಳು ನಿಯಂತ್ರಿಸುವ ಸಲುವಾಗಿ ಸರ್ಕಾರ ಇಂದಿನಿಂದ ಜಾರಿಗೊಳಿಸಿರುವ ಲಕ್‍ಡೌನ್‍ಗೆ ಕೊರಟಗೆರೆ ತಾಲ್ಲೂಕಿನಲ್ಲಿ ಪೊಲೀಸ್ ಇಲಾಖೆಯ ಕಾರ್ಯಾಚರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಲಾಕ್‍ಡೌನ್ ಮೂಲಕ ಕೆಲ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆ ಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳಾದ ಹಾಲು, ಮೊಸರು, ತರಕಾರಿ ಮತ್ತು ದಿನಸಿ ಪದಾರ್ಥಗಳಿಗೆ ಸಂಬಂಧಿಸಿದ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದ್ದವು. ಈ ಅವಧಿಯಲ್ಲಿ ಸಾರ್ವಜನಿಕರು ಸಹ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗಳತ್ತ ತೆರಳಿದ ದೃಶ್ಯಗಳು ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಅಂಗಡಿಗೆ ತೆರಳುವವರು ಬೈಕ್‍ನಲ್ಲಿ ಹೋಗದಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ನಡೆದುಕೊಂಡೆ ಅಂಗಡಿಗಳಿಗೆ ತೆರಳಿ ತಮಗೆ ಬೇಕಾದ ದಿನಸಿ ಪದಾರ್ಥಗಳನ್ನು ಖರೀದಿಸಿದ ದೃಶ್ಯಗಳು ಕಂಡು ಬಂದವು.
ಲಾಕ್‍ಡೌನ್ ಹಿನ್ನ್ನೆಲೆಯಲ್ಲಿ ಕಠಿಣ ನಿಯಮಗಳು ಜಾರಿಯಾಗಿರುವುದರಿಂದ 10 ಗಂಟೆಗೂ ಮುನ್ನವೆ ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಜನ ಜಂಗುಳಿ ಕಫ್ರ್ಯೂ ಅವಧಿಯಲ್ಲಿ ಇದ್ದಂತೆ ಕಂಡು ಬರಲಿಲ್ಲ. ಬೆಳಗ್ಗೆ 10 ಗಂಟೆಯ ನಂತರ ತುರ್ತು ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಸ್ಪೋರ್‍ಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಅಂಗಡಿ ಮುಂಗಟ್ಟುಗಳು, ತರಕಾರಿ, ಹಣ್ಣಿನ ಅಂಗಡಿಗಳು ಬಾಗಿಲು ಮುಚ್ಚಿದವು. ಈ ಸಂದರ್ಭದಲ್ಲಿ ತಹಸೀಲ್ದಾರ್ ಗೋವಿಂದರಾಜು, ಪೊಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಪಿಎಸೈ ಮುತ್ತುರಾಜು, ಎಎಸ್‍ಐಗಳಾದ ಯೋಗೀಶ್, ಮಂಜುನಾಥ್, ಪ.ಪಂ. ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಆರೋಗ್ಯ ನಿರೀಕ್ಷಕ ರೈಸ್ ಮಹಮದ್ ಸೇರಿದಂತೆ ಇನ್ನಿತರರು ಪಟ್ಟಣದಾದ್ಯಂತ ಸಂಚರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ