ಕೊರಟಗೆರೆ :
ಬಡ ರೈತರಿಗೆ ಸೇರಿದ 6 ಮೇಕೆ ಹಾಗೂ 14 ನಾಟಿ ಕೋಳಿಗಳನ್ನು ಎರಡು ನಾಯಿಗಳು ಅಟ್ಟಾಡಿಸಿಕೊಂಡು ದಾಳಿ ಮಾಡಿ ಸಾಯಿಸಿರುವ ಘಟನೆ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲ್ಲೂಕು ದಾಸರಳ್ಳಿ ಗ್ರಾಮದ ಬಳಿಯ ಪುಟ್ಟಮ್ಮನಪಾಳ್ಯದಲ್ಲಿ ಈ ದುರ್ಘಟನೆ ಜರುಗಿದೆ. ಇದೇ ಗ್ರಾಮದ ದೊಡ್ಡ ನರಸಪ್ಪನ ಮಗ ಮುನಿಯಪ್ಪನಿಗೆ ಸೇರಿದ ಮೇಕೆ ಹಾಗೂ ಕೋಳಿಗಳನ್ನು ನಾಯಿಗಳು ಭಾನುವಾರ ಮಧ್ಯರಾತ್ರಿ ರೊಪ್ಪಕ್ಕೆ ನುಗ್ಗಿ ದಾಳಿ ನಡೆಸಿ ಮನಸೋ ಇಚ್ಛೆ ಕಡಿದು ಸಾಯಿಸಿವೆ ಎನ್ನಲಾಗಿದೆ.
ಬಡ ರೈತ ಮುನಿಯಪ್ಪ 20 ಮೇಕೆ ಹಾಗೂ 30 ಕೋಳಿಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದ್ದು, ಈ ಘಟನೆಯಿಂದ ರೈತ ಕಂಗಾಲಾಗಿದ್ದಾರೆ. ಜೀವನೋಪಾಯಕ್ಕಾಗಿ ಸಾಕಿದ ಮೇಕೆ ಹಾಗೂ ಕುರಿಗಳನ್ನು ಕಳೆದುಕೊಂಡ ಬಡರೈತ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಈ ಹಿಂದೆ ಸಹ ನಾಯಿಗಳಿಂದ ಹಲವು ದುರ್ಘಟನೆಗಳು ಜರುಗಿದ್ದು, ನಾಯಿ ಮಾಲಿಕ ನಾಗರಾಜ್ ಅವರಿಗೆ ಹಲವು ಬಾರಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಾಣ ಹಾನಿ ಸೇರಿದಂತೆ ದೊಡ್ಡ ಅನಾಹುತ ಆಗುವ ಮುಂಚೆ ಎಚ್ಚೆತ್ತುಕೊಂಡು ಗ್ರಾಮ ಪಂಚಾಯತಿಯವರು ಈ ನಾಯಿಗಳನ್ನು ಸೆರೆ ಹಿಡಿಯಬೇಕು ಹಾಗೂ ನಾಯಿಗಳಿಂದ ಆದಂತ ನಷ್ಟವನ್ನು ರೈತನಿಗೆ ಸರ್ಕಾರ ತುಂಬಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಪಶು ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಸಿಗಬಹುದಾದ ಪರಿಹಾರವನ್ನು ಶೀಘ್ರ ಕೊಡಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಈ ಘಟನೆ ನಾಯಿಗಳಿಂದ ಜರುಗಿದೆ ಎಂದು ತಿಳಿದು ಬಂದಿದ್ದರೂ ಸಹ ಈ ವ್ಯಾಪ್ತಿಯ ತುಂಬಾಡಿ ಗ್ರಾಮ ಪಂಚಾಯಿತಿ ಪಿಡಿಓ ಆಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಬಾರದಿರುವುದು ಗ್ರಾಮ ಪಂಚಾಯತಿ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
