ಕೊರಟಗೆರೆ :
ಭ್ರಷ್ಟಾಚಾರ ನಿಗ್ರಹ ದಳದ ದಾಳಿಯಿಂದ ಎಚ್ಚೆತ್ತುಕೊಂಡ ಬೆಸ್ಕಾಂ ಅಧಿಕಾರಿಗಳು ರೈತ ರಾಘವೇಂದ್ರರ ಜಮೀನಿಗೆ ನೂತನ ಟ್ರಾನ್ಸ್‍ಫಾರ್ಮರ್ ಅಳವಡಿಸಿದ್ದಾರೆ.
ತಾಲ್ಲೂಕಿನ ಕೋಳಾಲ ಹೋಬಳಿಯ ಕೆಂಗನಪಾಳ್ಯದ ರೈತ ರಾಘವೇಂದ್ರ ಎಂಬುವರಿಂದ ಜಮೀನಿಗೆ ಬೆಸ್ಕಾಂ ಇಲಾಖೆ ಅಳವಡಿಸಿದ್ದ ಟ್ರಾನ್ಸ್‍ಫಾರ್ಮರ್ ರಿಪೇರಿ ಮಾಡಲು ಬೆಸ್ಕಾಂ ತೀತಾ ವಿಭಾಗದ ಸಹಾಯಕ ಶಾಖಾಧಿಕಾರಿ ಮಹಮದ್‍ರಫಿ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೇ24 ರಂದು ಬೆಳಗ್ಗೆ ಕೊರಟಗೆರೆ ಪಟ್ಟಣದಲ್ಲಿ ಬೆಸ್ಕಾಂ ಇಲಾಖೆ ಬಳಿ ಮಹಮದ್ ರಫಿ ರೈತ ರಾಘವೇಂದ್ರರಿಂದ ಲಂಚದ ಹಣ ಪಡೆಯುವಾಗ ತುಮಕೂರು ಭ್ರಷ್ಟ್ಟಾಚಾರ ನಿಗ್ರಹ ದಳ ಇಲಾಖೆಯ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ಮತ್ತು ಇನ್‍ಸ್ಪೆಕ್ಟರ್ ವಿಜಯಲಕ್ಷ್ಮೀ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು 10 ಸಾವಿರ ನಗದು ಸಮೇತ ಬಂಧಿಸಿ ತನಿಖೆ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮೇ 25 ರಂದು ಬೆಸ್ಕಾಂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತ ರಾಘವೇಂದ್ರರ ಜಮೀನಿಗೆ ನೂತನ ಟ್ರಾನ್ಸ್‍ಫಾರ್ಮರ್ ಅಳವಡಿಸಿದ್ದಾರೆ. ಕೆಂಗನಪಾಳ್ಯದ ರೈತ ರಾಘವೇಂದ್ರ ಕಳೆದ ಆರು ತಿಂಗಳ ಹಿಂದೆ ಜಮೀನಿಗೆ ಹೊಸದಾಗಿ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‍ಫಾರ್ಮರ್ ಅಳವಡಿಸಲು 1 ಲಕ್ಷ 50 ಸಾವಿರ ಹಣ ನೀಡಿ ವಿದ್ಯುತ್ ಸಂಪರ್ಕ ಪಡೆದಿದ್ದರು. ಆದರೆ ಈಗ ಟಿ.ಸಿ ಸುಟ್ಟು ಹೋಗಿದ್ದು, ಅದನ್ನು ರಿಪೇರಿ ಮಾಡಲು ಮತ್ತೆ ತೀತಾ ಬೆಸ್ಕಾಂ ಶಾಖಾಧಿಕಾರಿ ಮಹಮದ್ ರಫಿ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ರೈತನ ಮನವಿ;-
ರೈತ ರಾಘವೇಂದ್ರ ಮಾತನಾಡಿ, ತಾಲ್ಲೂಕಿನಲ್ಲಿ ಸಾವಿರಾರು ರೈತರು ಇದ್ದು, ರೈತರ ಅನೇಕ ಸಮಸ್ಯೆಗಳು ಇಲಾಖೆಗಳಲ್ಲಿ ಬಗೆಹರಿಯದೆ, ಕೆಲ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟು, ರೈತರನ್ನು ಶೋಷಣೆಗೆ ಒಳಪಡಿಸುತ್ತಿದ್ದಾರೆ. ಅಂತವರಿಗೆ ತಕ್ಕ ಪಾಠ ಕಲಿಸಲು ರೈತರು ಮುಂದಾಗ ಬೇಕು. ಲಂಚ ಕೇಳುವ ನೌಕರರ ಮತ್ತು ಅಧಿಕಾರಿಗಳ ಬಗ್ಗೆ ಧೈರ್ಯವಾಗಿ ಭ್ರಷ್ಟ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ತಿಳಿಸಿ, ಶಿಕ್ಷೆ ಕೊಡಿಸಿದರೆ ಇಲಾಖೆಗಳಲ್ಲಿ ಲಂಚಗುಳಿತನ ಮಾಯವಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ