ಕೊರಟಗೆರೆಗೆ ಭೂ ಮಾಫಿಯಾ ಎಂಟ್ರಿ!!

ಕೊರಟಗೆರೆ : 

      ತೋಟಗಾರಿಕಾ ಕ್ಷೇತ್ರ, ಅರಣ್ಯ ಪ್ರದೇಶ, ಸರಕಾರಿ ಗೋಮಾಳ ಮತ್ತು ಸರಕಾರಿ ಕೆರೆ-ಕಟ್ಟೆಗಳು ರಾತ್ರೋರಾತ್ರಿ ನೆಲ ಸಮ. ಕೊರಟಗೆರೆ ಕ್ಷೇತ್ರದ ಗಡಿಭಾಗದ ಸರಕಾರಿ ಜಮೀನುಗಳಿಗೆ ಸರಕಾರದ ಭದ್ರತೆಯೇ ಮರೀಚಿಕೆ. ದಾಖಲೆಯೇ ಇಲ್ಲದ ರೈತರ ಜಮೀನು ಖರೀದಿಸಿ ಅಕ್ಕಪಕ್ಕದ ಸರಕಾರಿ ಜಮೀನು ಸಕ್ರಮ ಮಾಡಿಕೊಳ್ಳಲು ಮುಂದಾಗಿರುವ ಕೇರಳ ಭೂಗಳ್ಳರಿಗೆ ರಾಜ್ಯ ಸರಕಾರ ಮತ್ತು ಜಿಲ್ಲಾಧಿಕಾರಿ ಕಡಿವಾಣ ಹಾಕಬೇಕಿದೆ.

      ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗಡಿ ಭಾಗವಾದ ಗಂಗೇನಹಳ್ಳಿ ಅರಣ್ಯ ಪ್ರದೇಶ ಮತ್ತು ದೊಡ್ಡಸಾಗ್ಗೆರೆ ತೋಟಗಾರಿಕಾ ಕ್ಷೇತ್ರದ ಅರ್ಧಭಾಗ ಈಗಾಗಲೆ ಭೂಗಳ್ಳರ ಪಾಲಾಗಿದೆ. ಕಂದಾಯ, ಸಾಮಾಜಿಕ ಅಥವಾ ವಲಯ ಅರಣ್ಯ ಅಧಿಕಾರಿಗಳ ತಂಡ ತೆರವಿಗೆ ಮುಂದಾದರೆ ರಾಜ್ಯ ಸರಕಾರ, ಸಚಿವ ಮತ್ತು ಸಂಸದರಿಂದ ದೂರವಾಣಿ ಕರೆ ಮಾಡಿಸಿ ವರ್ಗಾವಣೆ ಮಾಡಿಸುವ ಬೆದರಿಕೆಯ ಕೆಲಸ ಸರ್ವೆ ಸಾಮಾನ್ಯವಾಗಿದೆ.

      ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಸಾಗ್ಗೆರೆ, ಗಂಗೇನಹಳ್ಳಿ, ಕಾಶಾಪುರ, ತೋವಿನಕೆರೆ, ಕೋಳಾಲ ಗಡಿ ಭಾಗದ ನೂರಾರು ಎಕರೆ ಸರಕಾರಿ ಗೋಮಾಳದ ಜಮೀನು ಕೇರಳ, ತಮಿಳುನಾಡು ಮತ್ತು ಆಂಧ್ರ್ರಪ್ರದೇಶ ಮೂಲದ ವಾಣಿಜ್ಯ ಉದ್ಯಮಿಗಳ ಪಾಲಾಗಿದೆ. . ದಾಖಲೆಯೆ ಇಲ್ಲದಿರುವ ರೈತಾಪಿವರ್ಗ ಸ್ವಾಧೀನದ ಜಮೀನಿಗೆ ಕೋಟ್ಯಂತರ ರೂ. ಬೆಲೆ ಕಟ್ಟಿ ಖರೀದಿಸುವ ಪ್ರಯತ್ನ ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಿದೆ. ಜಿಲ್ಲಾಡಳಿತ, ಕಂದಾಯ ಸಚಿವ ಮತ್ತು ರಾಜ್ಯ ಸರಕಾರ ಭೂಮಾಫಿಯಾ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

 13 ಎಕರೆ ಸ್ವಂತ..7ಎಕರೆ ಸರಕಾರಿ..!

      ಕೊರಟಗೆರೆ ಗಡಿ ಭಾಗದ ಗಂಗೇನಹಳ್ಳಿ ಸರ್ವೇ ನಂ.7, 8, 9ರಲ್ಲಿ ಕೇರಳ ಮೂಲದ ರಾಜಗೋಪಾಲನ್ ಮಗ ಸುನೀಲ್ ಎಂಬಾತನ ಹೆಸರಿನಲ್ಲಿ 13 ಎಕರೆ ಜಮೀನಿದೆ. ಪೂರ್ವ ಮತ್ತು ದಕ್ಷಿಣಕ್ಕೆ ಸರಕಾರಿ ಗೋಮಾಳದ 7 ಎಕರೆ ಒತ್ತುವರಿ ಜಮೀನಿಗೆ ತಂತಿಬೇಲಿಯಿಂದ ಕಾಂಪೌಂಡ್ ನಿರ್ಮಿಸಿ ಅಕ್ರಮವಾಗಿ 3 ಕೊಳವೆಬಾವಿ ಕೊರೆಯಲಾಗಿದೆ. ಇವರ ಜಮೀನಿನ ಸುತ್ತಮುತ್ತಲ ಕೊರಟಗೆರೆ ಕ್ಷೇತ್ರದ ರೈತರಿಗೆ ಆಗದಿರುವ ಜಮೀನು ದಾಖಲೆ ಇವರಿಗೆ ಮಾಡಿ ಕೊಟ್ಟವರು ಯಾರು ಎಂಬುದೆ ಯಕ್ಷಪ್ರಶ್ನೆ..!

1ಟ್ರಾನ್ಸ್‍ಫಾರ್ಮರ್‍ಗೆ 5 ಕೊಳವೆಬಾವಿ..!

      ಕೇರಳ ಮೂಲದ ಖಾಸಗಿ ವ್ಯಕ್ತಿಯ 13 ಎಕರೆ ಎಸ್ಟೇಟ್‍ನಲ್ಲಿ 10 ಕ್ಕೂ ಅಧಿಕ ಕೊಳವೆಬಾವಿ ಕೊರೆಸಲಾಗಿದೆ.25 ಕೆವಿಯ 1 ಟ್ರಾನ್ಸ್‍ಫಾರ್ಮರ್‍ನಿಂದ 5 ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೃಷಿಯ ಉದ್ದೇಶಕ್ಕಾಗಿ ಕೊರೆಸಿರುವ ಕೊಳವೆ ಬಾಯಿ ಕೃಷಿಗೆ ಬಳಕೆಯಾಗದೆ ದುರುಪಯೋಗ ಆಗಿದೆ. ಬೆಸ್ಕಾಂ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ವಿದ್ಯುತ್ ಸಂಪರ್ಕವೇ ಕವಲುದಾರಿ ಹಿಡಿದಿದೆ. ಕೊಳವೆಬಾವಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿಯನ್ನು ಗಿಡ-ಮರಗಳಿಗೆ ಅಳವಡಿಸಿದ್ದಾರೆ.

      ಗಂಗೇನಹಳ್ಳಿ ಸರ್ವೆ ನಂ.13ರ 7ಎಕರೆ ಸರಕಾರಿ ಗೋಮಾಳ ಜಮೀನಿನಲ್ಲಿದ್ದ ಮರಗಿಡ ನಾಶಪಡಿಸಿ, ಸುನೀಲ್ ಎಂಬಾತ ಅಕ್ರಮವಾಗಿ ತಂತಿಬೇಲಿ ಹಾಕಿದ್ದಾರೆ. ಈತನಿಗೆ ಏ.24ರಂದು ಜಮೀನಿನ ದಾಖಲೆಗಾಗಿ ನೊಟೀಸ್ ಜಾರಿ ಮಾಡಲಾಗಿದೆ. ಸಮರ್ಪಕ ದಾಖಲೆ ನೀಡದಿರುವ ಪರಿಣಾಮ 7 ಎಕರೆ ಜಮೀನು ತೆರವುಗೊಳಿಸಿ ಕೊಳವೆ ಬಾವಿ ಸರಕಾರದ ವಶಕ್ಕೆ ಪಡೆಯಲಾಗಿದೆ.

-ಗೋವಿಂದರಾಜು, ತಹಸೀಲ್ದಾರ್, ಕೊರಟಗೆರೆ.

      ಕೊರಟಗೆರೆ ಕ್ಷೇತ್ರದ ಜನರ ಸರಳತೆಯೆ ಉದ್ಯಮಿಗಳ ಬಂಡವಾಳ ಆಗಿದೆ. ವೀಕೆಂಡ್ ಮೋಜು ಮಸ್ತಿ ಮಾಡೋದಕ್ಕೆ ಸರಕಾರಿ ಜಾಗವನ್ನು ಕಬಳಿಸಿ ಮೂಲ ರೈತರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಉದ್ಯಮಿಗಳ ಲಾಬಿಗೆ ರೈತರು ಮಣಿಯದೆ ಜಮೀನಿಗೆ ಆದ್ಯತೆ ನೀಡಬೇಕಿದೆ. ಕರ್ನಾಟಕ ರೈತ ಸಂಘ ರೈತರ ಪರವಾಗಿ ಇರಲಿದೆ. ಹೊರ ರಾಜ್ಯದ ಭೂ ಮಾಫಿಯಾಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕಿದೆ.

-ಆನಂದಪಟೇಲ್, ಜಿಲ್ಲಾಧ್ಯಕ್ಷ, ರೈತಸಂಘ, ತುಮಕೂರು.

      ಗಂಗೇನಹಳ್ಳಿ ಜಮೀನಿನ ವಿಚಾರವಾಗಿ ನಾನೇನು ಮಾತನಾಡೋಲ್ಲ. ಸರಕಾರದಜಮೀನುತೆರವಿಗೆ ನನ್ನದೇನುತಕರಾರುಇಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಕೀಲರು ನಿಮಗೆ ಉತ್ತರಕೋಡ್ತಾರೇ.ನಾನು ಮಾತನಾಡದಂತೆ ವಕೀಲರು ನಮಗೆ ಸೂಚನೆ ನೀಡಿದ್ದಾರೆ.ನೀವು ಬೇಕಾದರೇ ನಮ್ಮ ವಕೀಲರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

-ಸುನೀಲ್. ಜಮೀನು ಮಾಲೀಕ. ಬೆಂಗಳೂರು

ರಂಗಧಾಮಯ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap